Advertisement
4:35 AM Friday 8-December 2023

ಫೆ.19 ರಂದು ಬಾಳೆಯಡ ಕಿಶನ್ ಪೂವಯ್ಯ ರಚಿತ ಎರಡು ಪುಸ್ತಕಗಳು ಬಿಡುಗಡೆ

14/02/2023

ಮಡಿಕೇರಿ ಫೆ.14 : ಕೊಡವ ಮಕ್ಕಡ ಕೂಟ ಮತ್ತು ಕಾವೇರಿ ಕೇರಿ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ಫೆ.19 ರಂದು ವಕೀಲ, ಕ್ರೀಡಾಪಟು ಹಾಗೂ ಬರಹಗಾರ ಬಾಳೆಯಡ ಕಿಶನ್ ಪೂವಯ್ಯ ಅವರು ಬರೆದಿರುವ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಉದ್ಘಾಟಿಸಲಿದ್ದು, ಕಾವೇರಿಕೇರಿ ಕೊಡವ ಸಂಘದ ಅಧ್ಯಕ್ಷರಾದ ಬಲ್ಯಾಟಂಡ ಲತಾ ಚಂಗಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜಕೀಯ ಮತ್ತು ಪ್ರಕೃತಿ ಪುಸ್ತಕವನ್ನು ಸಾಹಿತಿ ಹಾಗೂ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಯ (ಕಂಜರ್ಪಣೆ), ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ ಪುಸ್ತಕವನ್ನು ಎಕ್ಸ್ಪ್ರೆಸ್ ಲಿ. ಸೌತ್ ಬ್ಲೂ ಡಾರ್ಟ್ ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ ಅವರು ಬಿಡುಗಡೆ ಮಾಡಲಿದ್ದಾರೆ.
ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಪುಸ್ತಕ ಪರಿಚಯ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಹಾಗೂ ಬರಹಗಾರ ಕಿಶನ್ ಪೂವಯ್ಯ ಉಪಸ್ಥಿತರಿರುವರು.
::: ಬರಹಗಾರರ ಪರಿಚಯ :::
ಕಿಶನ್ ಪೂವಯ್ಯ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ.ಮತ್ತು ಬೆಂಗಳೂರು ಹಾವನೂರ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮಾಡಿದ್ದಾರೆ.
2001-2018 ಅವಧಿಯಲ್ಲಿ ವಕೀಲ ಸಂಘದ ಮಡಿಕೇರಿಯ ನಿರ್ದೇಶಕರಾಗಿ, ಜಂಟಿ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುದ್ದಿ ಪತ್ರಿಕೆಗಳ ಅಂಕಣಕಾರ, ಸ್ಥಳೀಯ ವಾಹಿನಿಗಳು ಮತ್ತು ಆಕಾಶವಾಣಿಯಲ್ಲಿ ಕ್ರೀಡಾ ನಿರೂಪಣೆ ಮಾಡಿ ಗಮನ ಸೆಳೆದಿದ್ದಾರೆ.
1992 ರಿಂದ ಕಾವೇರಿ ಕೇರಿ ಕೊಡವ ಸಂಘದ ನಿರ್ದೇಶಕರಾಗಿ ಮತ್ತು 2010-12ರ ವರೆಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1995-98 ಜನತಾದಳ ಪಕ್ಷದ ಮಡಿಕೇರಿ ಕಾರ್ಯದರ್ಶಿಯಾಗಿ, ನಂತರ ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ.
ಮಡಿಕೇರಿ ದಸರಾ ಕ್ರೀಡಾ ಸಮಿತಿ ಮತ್ತು ಸ್ವಾಗತ ಸಮಿತಿಯಲ್ಲಿ 15 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 1997-99ರಲ್ಲಿ ಕಾವೇರಿ ಭಕ್ತ ಮಂಡಳಿ ಅಧ್ಯಕ್ಷ ಅಧ್ಯಕ್ಷರು, 1996-2000 ಬಾಳೆಯಡ ಕುಟುಂಬದ ಅಧ್ಯಕ್ಷರಾಗಿ ಮತ್ತು ಮ್ಯಾನ್ಸ್ ಹಾಕಿ ಅಕಾಡೆಮಿ -2005ರ ಸ್ಥಾಪಕರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
2010 ರಿಂದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ, ವಾಂಡರರ್ ಸ್ಪೋರ್ಟ್ಸ್ ಕ್ಲಬ್ ಮಡಿಕೇರಿಯ ಕಾರ್ಯದರ್ಶಿ, 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿ ಸಮಿತಿಯ ಮುಖ್ಯ ಸಂಚಾಲಕ, ಮಡಿಕೇರಿ ಜಿಲ್ಲಾ ಕುಟುಂಬದ ಕ್ರೀಡಾ ಸಮಿತಿ ಸಂಸ್ಥಾಪಕರು ಹಾಗೂ ಸಂಚಾಲಕರು, ಬಾಳೆಯಡ ಕುಟುಂಬದ ಕ್ರೀಡಾ ಸಮಿತಿಯ ಸಂಸ್ಥಾಪಕರು ಮತ್ತು ಪ್ರಸ್ತುತ ಕೂರ್ಗ್ ಹಾಕಿ ಅಸೋಸಿಯೇಷನ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
::: ಕೊಡವ ಮಕ್ಕಡ ಕೂಟ :::

ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತ ಇಲ್ಲಿಯವರೆಗೆ ಒಟ್ಟು 60 ಪುಸ್ತಕಗಳನ್ನು ಹೊರ ತಂದಿದ್ದು, ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದೆ. ಮೂರು ಪುಸ್ತಕಗಳು ಕೊಡವ ಸಿನಿಮಾವಾಗಿದೆ.
ಅಲ್ಲದೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಕೊಡವ ಮಕ್ಕಡ ಕೂಟ ಹೊರ ತರುತ್ತಿರುವ 61ನೇ ಪುಸ್ತಕ “ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ” ಯಲ್ಲಿ ಸಾಮಾಜಿಕ ಚಿಂತನೆಯ ಹಲವು ಬರಹದೊಂದಿಗೆ ಹಿರಿಯ ರಾಜಕೀಯ ಮುತ್ಸದ್ಧಿ ಅಟಲ್ ಜೀ, ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಟಿ.ಪಿ.ರಮೇಶ್, ಡಾ.ಗಣಪತಿ, ಡಾ.ಸೂರ್ಯಕುಮಾರ್, ಪುನೀತ್ ರಾಜ್‌ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಶ್ರೇಷ್ಠ ವ್ಯಕ್ತಿಗಳ ಪರಿಚಯ ಮತ್ತು ಜೀವನ ಚರಿತ್ರೆಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ.
62ನೇ ಪುಸ್ತಕ “ರಾಜಕೀಯ ಮತ್ತು ಪ್ರಕೃತಿ” ಯಲ್ಲಿ ಪ್ರಕೃತಿಯ ಮೇಲೆ ದಾಳಿಗಳು ನಡೆದಾಗ ಮುಂದಿನ ಭವಿಷ್ಯದ ಯುವ ಪೀಳಿಗೆಯ ಮೇಲೆ ಇದು ಯಾವ ದುಷ್ಪರಿಣಾಮವನ್ನು ಬೀರಬಲ್ಲದು ಮತ್ತು ಕೊಡಗಿನ ಆಸ್ತಿಯೇ ಆಗಿರುವ ಪ್ರಕೃತಿಯ ವಿನಾಶ ಹೇಗೆ ಆಗಬಹುದು ಎನ್ನುವುದನ್ನು ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಲೇಖನದ ಮೂಲಕ ಮನಮುಟ್ಟುವಂತೆ ಬೆಳಕು ಚೆಲ್ಲಿದ್ದಾರೆ.