ಇದೇ ಅಲ್ಲವೇ ಅಭಿವೃದ್ಧಿಯೆಂದರೆ !
14/02/2023

ಮಡಿಕೇರಿ ಫೆ.4 : ಇತ್ತೀಚಿನ ದಿನಗಳನ್ನು ನಾನು ಸೇರಿದಂತೆ ನನ್ನ ಆಪ್ತವಲಯದ ಕೆಲವು ಜನರು ವಿಚಿತ್ರವಾದ ತೊಂದರೆಗೆ ತುತ್ತಾದೆವು. ಮಡಿಕೇರಿಯಿಂದ ಬೆಂಗಳೂರಿಗೆ ನೈಟ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಮುಂಜಾನೆ ಐದು ಗಂಟೆಗೆ ಈ ಹಿಂದೆ ತಲುಪುತ್ತಿದ್ದ ಬಸ್ಸುಗಳು ನಮ್ಮನ್ನು ಮುಂಜಾನೆ ಮೂರುಗಂಟೆಯ ಆಸುಪಾಸಿಗೆ ಮೆಜೆಸ್ಟಿಕ್ ತಲುಪಿಸಿ ನಮ್ಮನ್ನು ತ್ರಿಶುಂಕು ಸ್ಥಿತಿಯಲ್ಲಿ ಇಟ್ಟುಬಿಟ್ಟವು. ಬೆಂಗಳೂರಿನಲ್ಲಿ ಯಾವುದೇ ಸರಕಾರಿ ಕೆಲಸ ಅಥವಾ ವೈಯುಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಿದ್ದರೆ ಮಡಿಕೇರಿಯಿಂದ ನೈಟ್ ಬಸ್ ಹತ್ತಿ ಹೆಚ್ಚಿನ ಶ್ರೀಸಾಮಾನ್ಯರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಹೆಂಗಸರಿಗೆ, ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಈ ರಾತ್ರಿ ಬಸ್ಸಿನ ಪ್ರಯಾಣ ಸಮಸ್ಯೆಯಾಗುತ್ತದೆ. ಸುಮಾರು ಆರರಿಂದ- ಏಳು ಗಂಟೆಗಳ ಪ್ರಯಾಣದ ನಂತರ ಬೆಂಗಳೂರು ತಲುಪಿದ ಬಳಿಕ ಫ್ರೆಶ್ ಆಗಲು ಹೋಟೆಲು ಅಥವಾ ಅತಿಥಿ ಗೃಹಗಳ ವ್ಯವಸ್ಥೆ ಮಾಡಿಕೊಳ್ಳುವ ಆರ್ಥಿಕ ಹೊರೆಯೂ ಈ ಜನರ ಮೇಲೆ ಇರುತ್ತಿತ್ತು. ವಾಪಾಸು ಕೊಡಗಿಗೆ ಬರಲು ಮತ್ತೆ ನೈಟ್ ಬಸ್ ಹಿಡಿಯಬೇಕಾಗಿದ್ದರಿಂದ ಎರಡು ರಾತ್ರಿಗಳ ನಿದ್ದೆ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಪ್ರಾರಂಭವಾದ ನಂತರ ನಾಲ್ಕುವರೆಯಿಂದ ಐದುಗಂಟೆಯ ಅವಧಿಯಲ್ಲಿ ಬೆಂಗಳೂರು ತಲುಪಬಹುದು. ಮುಂಜಾನೆ ನಾಲ್ಕುವರೆ ಗಂಟೆಗೆ ಒಂದು ಮತ್ತು ಐದು ಗಂಟೆಗೆ ಮತ್ತೊಂದು ಕೆಂಪುಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಇದೆ. ಮುಂಜಾನೆ ಮಡಿಕೇರಿ ಈ ಬಸ್ಸಿನಲ್ಲಿ ಬಿಟ್ಟರೆ ಹತ್ತು ಗಂಟೆಗೆ ಬೆಂಗಳೂರು ತಲುಪಿ ಅದೇ ದಿನ ತಮ್ಮ ಕೆಲಸ ಮುಗಿಸಿ ಸಂಜೆ ಬೆಂಗಳೂರು ಬಿಟ್ಟರೆ ರಾತ್ರಿ ಮಡಿಕೇರಿಗೆ ಬಸ್ಸಿನಲ್ಲಿ ವಾಪಾಸು ಬರಬಹುದು. ಇದೇ ಅಲ್ಲವೇ ಅಭಿವೃದ್ಧಿಯೆಂದರೆ!
ಸಂಸದರಾದ ಪ್ರತಾಪ್ ಸಿಂಹನವರು ತಮ್ಮ ದೂರದೃಷ್ಟಿಯಿಂದ ಛಲ ಬಿಡದ ತ್ರಿವಿಕ್ರಮರಂತೆ ಈ ಯೋಜನೆಯ ಹಿಂದೆ ಬಿದ್ದು ಕಾರ್ಯರೂಪಕ್ಕೆ ತಂದಿರುವುದು ಸಮಾನ್ಯದ ಸಂಗತಿಯಲ್ಲ. ಡೆಹಲಿ ಮೆಟ್ರೋ ಪ್ರಾಜೆಕ್ಟನ್ನು ಕೊಟ್ಟ ಸಮಯದಲ್ಲಿ ಮಾಡಿ ಮುಗಿಸಿದ ಮೆಟ್ರೋ ಮ್ಯಾನ್ ಈ ಶ್ರೀಧರನ್ ಅವರ ಬಯಾಗ್ರಫಿ “ಕರ್ಮಯೋಗಿ” ಓದಿದವರಿಗೆ ಸರಕಾರದ ರೆಡ್ ಟೇಪಿಸಮ್ ನಡುವೆ ಪ್ರಾಜೆಕ್ಟಗಳನ್ನು ಡೆಲಿವರಿ ಮಾಡುವ ಸವಾಲುಗಳು ಅರ್ಥವಾಗಬಹುದು. ಕುಶಾಲನಗರ ಮತ್ತು ಮೈಸೂರು ಚತುಷ್ಪಥ ಕಾಮಗಾರಿಯೂ ಮುಂದಿನ ತಿಂಗಳು ಆರಂಭವಾಗುವು ಸುದ್ದಿಯನ್ನು ಇಂದು ಪತ್ರಿಕೆಗಳಲ್ಲಿ ಓದಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾಲ್ಕು ಗಂಟೆಗಳ ಒಳಗೆ ಮಡಿಕೇರಿಯಿಂದ ಬೆಂಗಳೂರು ತಲುಪುವ ದಿನ ಬರುತ್ತದೆ. ಇದರಿಂದ ಲಕ್ಷಾಂತರ ಜನರಿಗೆ ಲಾಭವಾಗಲಿದೆ. ಇಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಸಾವಿರಾರು ಜನರು ವಾರದಲ್ಲಿ ಒಂದೆರಡು ದಿನ ಬೆಂಗಳೂರಿನ ತಮ್ಮ ಆಫೀಸುಗಳಿಗೆ ಅದೇ ದಿನ ಹೋಗಿ ಬರುವುದೂ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ. ಈ ಕಾವೇರಿ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಸಂಸದರಾದ ಪ್ರತಾಪ್ ಸಿಂಹನವವರ ಮೇಲೆ ಕಾವೇರಿ ತಾಯಿಯ ಆಶೀರ್ವಾದ ಸದಾ ಇರಲಿ.
ಬದಲಾದ ಸನ್ನಿವೇಶದಲ್ಲಿ ನಮ್ಮ ಸಾರಿಗೆ ಇಲಾಖೆಯವರು ರಾತ್ರಿ ಬಸ್ಸುಗಳನ್ನು ಕಡಿಮೆ ಮಾಡಿ ಮುಂಜಾನೆ ಐದು ಗಂಟೆಗೆ ಮಡಿಕೇರಿಯಿಂದ ಬೆಂಗಳೂರಿಗೆ ಒಂದೆರಡು ವೋಲ್ವೋ ಬಸ್ಸುಗಳನ್ನು ಬಿಟ್ಟರೆ ಜನರಿಗೆ ಹೆಚ್ಚು ಅನುಕೂಲವಾಗುವುದು. ಸ್ಲೀಪರ್ ಕೋಚುಗಳಿಗೆ ವೀಕೆಂಡಿನಲ್ಲಿ ಎರಡು ಸಾವಿರ ರುಪಾಯಿ ತೆತ್ತು ಬರುವ ಸಂಕಷ್ಟಗಳೂ ಕಾಲ ಕ್ರಮೇಣ ಇರುವುದಿಲ್ಲ! ( Maj Kushvanth Kolibailu )
















