Advertisement
11:46 AM Monday 4-December 2023

ನಾಪೋಕ್ಲು-ಚೆರಿಯಪರಂಬು ಮಖಾಂ ಉರೂಸ್ ಸರ್ವ ಧರ್ಮ ಸಮ್ಮೇಳನ : ಸೌಹಾರ್ದತೆ ಇದ್ದರೆ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ : ಶುಹೈಬ್ ಫೈಝಿ

15/02/2023

ನಾಪೋಕ್ಲು  ಫೆ.15 :  ಸಮಾಜದಲ್ಲಿ ಎಲ್ಲಾ ಧರ್ಮದ ಜನಾಂಗದವರು ಯಾವುದೇ ಬೇಧ ಭಾವವಿಲ್ಲದೆ ಸೌಹಾರ್ದತೆಯಿಂದ ಇದ್ದರೆ ಮಾತ್ರ ಶಾಂತಿ ಕಾಣಲು ಸಾಧ್ಯ ಎಂದು ಶುಹೈಬ್ ಫೈಝಿ ಹೇಳಿದರು.

ನಾಪೋಕ್ಲುವಿನ ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಪಾಲ್ಗೊಂಡು  ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದ ವಿವಿಧ ಜಾತಿಯ ಜನರು ದೇಶದ ಸಂವಿಧಾನದ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಜಗತ್ತಿನಲ್ಲಿ ಉದಯಿಸಿ ಬಂದಂತಹ ಯಾವುದೇ ಧರ್ಮದ ಪ್ರವಾದಿಗಳಿರಲಿ, ಸಂತರಿರಲಿ,  ಪವಾಡ ಪುರುಷರಾಗಿರಲಿ, ಯಾವುದೇ ಪಂಡಿತರಿರಲಿ ಯಾರೂ ಸಹ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಹೇಲಿಲ್ಲ. ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಯಾವುದೇ ಧರ್ಮ ಭೇದವಿಲ್ಲ ನಾವೆಲ್ಲರೂ ಸಹೋದರರಂತೆ ಜೀವನ ನಡೆಸಬೇಕು. ಪ್ರಸ್ತುತ ಕಾಲದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕೆಲವು ಸಂಘಟನೆಗಳ ಹೆಸರಿನಲ್ಲಿ ಧರ್ಮಗಳ ಮದ್ಯೆ ಒಡಕನ್ನು ತಂದು ಜನರ ಸೌಹಾರ್ದತೆಗೆ ದಕ್ಕೆಬರುವಂತ ಕೃತ್ಯ ನಡೆಸುತ್ತಿದೆ. ಅಂತವರ ವಿರುದ್ಧ  ಧ್ವನಿ ಎತ್ತಬೇಕಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಜೀವನದಲ್ಲಿ ಧರ್ಮಗಳ ಪವಿತ್ರ ಗ್ರಂಥಗಳಾದ ಕುರಾನ್, ಬೈಬಲ್ ಅಥವಾ ಭಗವದ್ಗೀತೆ ಯನ್ನು ಓದಿ ತಿಳಿದುಕೊಂಡರೆ ನಮ್ಮಲ್ಲಿ ಯಾವುದೇ ಭಿನ್ನ ಭೇದ ವಿಲ್ಲದೆ ಸಮಾಜದಲ್ಲಿ ಸೌಹಾರ್ದತೆಯಿಂದ ಇರಲು ಸಾಧ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಾಅತ್ ಖತೀಬರಾದ ಹಂಝ ರಹ್ಮಾನಿ ಪ್ರತೀ ವರ್ಷ ಸರ್ವಧರ್ಮಿಯರನ್ನು ಒಗ್ಗೂಡಿಸಿ ಸಮ್ಮೇಳನ ಆಯೋಜಿಸುವುದರ ಉದ್ದೇಶ ಯುವಪೀಳಿಗೆ ಅರ್ಥಮಾಡಿಕೊಳ್ಳಬೇಕು ಇದರಿಂದ ಸಹೋದರತೆ, ಸಹಬಾಳ್ವೆ ನಾಡಿನಲ್ಲಿ ಬೆಳೆಯಲು ಸಹಕರಿಯಾಗಲಿದೆ ಎಂದರು.
ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹ್ಮಾನ್ ಪ್ರಸ್ತಾವಿಕವಾಗಿ ಮಾತನಾಡಿದರು.

ಜಮಾಅತ್ ಅಧ್ಯಕ್ಷ  ಕೆ.ಎಚ್.ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ನಾಪೋಕ್ಲು ಗ್ರಾ.ಪಂ.ಉಪಾಧ್ಯಕ್ಷ ಟಿ.ಎ. ಮಹಮ್ಮದ್, ಮಾಜಿ ಸದಸ್ಯ ಪಿ.ಎಂ.ರಶೀದ್,  ಮಾಜಿ ಜಮಾಅತ್ ಅಧ್ಯಕ್ಷ  ಪರವಂಡ ಅಬ್ದುಲ್ ರಹ್ಮಾನ್,  ಪಿ.ಎ.ಹಂಝ, ಪಿ.ಎಂ.ಅಬ್ದುಲ್ ರೆಹಮಾನ್ , ಸಮಾಜ ಸೇವಕರಾದ ಮೈಸಿ ಕತ್ತಣೀರ, ಕೆಸಿಎಫ್ ಅಧ್ಯಕ್ಷ ಉಸ್ಮಾನ್ ಹಾಜಿ,ಮಾಜಿ ಕಾರ್ಯದರ್ಶಿ ಪರವಂಡ ಸಿರಾಜ್, ಜಮಾಅತ್ ಪದಾಧಿಕಾರಿಗಳು ಮತ್ತಿತರರು  ಹಾಜರಿದ್ದರು.

ಉರೂಸ್ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ, ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ವರದಿ :ಝಕರಿಯ ನಾಪೋಕ್ಲು