Advertisement
12:39 AM Saturday 2-December 2023

ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಮಹಾಶಿವರಾತ್ರಿ ಮಹೋತ್ಸವ

15/02/2023

ಮಡಿಕೇರಿ ಫೆ.15 : ಮಡಿಕೇರಿ ನಗರದ ದಾಸವಾಳ ಬಡಾವಣೆಯಲ್ಲಿರುವ ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ ಫೆ.18 ರಂದು ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಂದು ಬೆಳಿಗ್ಗೆ 7 ಗಂಟೆಗೆ ಮಡಿವಾಳರ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ಮಹಾಗಣಪತಿ ಹೋಮ, 9 ಗಂಟೆಗೆ ನಗರದ ಗಣಪತಿ ಬೀದಿಯಿಂದ ಬನ್ನಿಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ವೀರಭದ್ರ ಉತ್ಸವ ಮೂರ್ತಿಯ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ಜಾಮ ಪೂಜೆ ಮತ್ತು ಸಂಜೆ 7 ಗಂಟೆಗೆ ರಂಗಪೂಜೆ ಜರುಗಲಿದೆ. ಜಾಗರಣೆ ಪ್ರಯುಕ್ತ ರಾತ್ರಿ 8 ಗಂಟೆಗೆ ಮಹಾಮೃತ್ಯುಂಜಯ ಹೋಮ ನಡೆಯಲಿದೆ. 10 ಗಂಟೆಗೆ ಸಭಾ ಕಾರ್ಯಕ್ರಮದ ನಂತರ ಮರುದಿನ ಬೆಳಿಗ್ಗೆ 5 ಗಂಟೆಯ ವರೆಗೆ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
::: ದ್ವಾರ ಉದ್ಘಾಟನೆ :::
ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಡಿವಾಳ ಮಾಚಿದೇವ ಮಹಾದ್ವಾರವನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಕಟೀಲು ಸಂಜೀವ ಮಡಿವಾಳ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಡಿವಾಳ ಅಭಿವೃದ್ಧಿ ಸಂಘದ ಹಿರಿಯ ಸಲಹೆಗಾರರಾದ ಎಂ.ಎನ್.ಸುಬ್ರಮಣಿ, ಶಕುಂತಲ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಉದ್ಯಮಿ ಹೇಮಂತ್ ರೆಡ್ಡಿ, ನಗರಸಭಾ ಸದಸ್ಯರಾದ ಕೆ.ಎಸ್.ರಮೇಶ್, ಎಸ್.ಸಿ.ಸತೀಶ್, ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಸುಧೀರ್ ಉದ್ಘಾಟಿಸಲಿದ್ದಾರೆ.
::: ನೃತ್ಯ ಸ್ಪರ್ಧೆ :::
ಸೋಲೋ ಹಾಗೂ ಗ್ರೂಪ್ ಎರಡು ವಿಭಾಗದಲ್ಲಿ ನೃತ್ಯ ಸ್ಪರ್ಧೆ ನಡೆಯಲಿದ್ದು, ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು.
ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಆಸಕ್ತರು ಫೆ.17ರ ಸಂಜೆ 4 ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೆ.ಕಿಶೋರ್ 9731024240 ಮತ್ತು ಎಂ.ಬಿ.ವಿಷ್ಣು-9164721416 ಸಂಪರ್ಕಿಸಬಹುದಾಗಿದೆ ಎಂದು ದೇವಾಲಯದ ಆಡಳಿತಮಂಡಳಿ ತಿಳಿಸಿದೆ.