ಮಡಿಕೇರಿ : ಮಾ.4 ಮತ್ತು 5 ರಂದು ಹಿಂದೂ ಕ್ರಿಕೆಟ್ ಕಪ್ ಪಂದ್ಯಾವಳಿ

ಮಡಿಕೇರಿ ಫೆ.15 : ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮಾ.4 ಮತ್ತು 5 ರಂದು ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 3ನೇ ವರ್ಷದ ‘ಹಿಂದೂ ಕ್ರಿಕೆಟ್ ಕಪ್-2023’ ನಡೆಯಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಸದಸ್ಯ ಎನ್.ವಿನಯ್ ಕುಮಾರ್, ವಿವಿಧ ಸಮಾಜಗಳು ತಮ್ಮ ಸಮೂಹಕ್ಕೆ ಸೀಮಿತವಾದ ಪಂದ್ಯಾವಳಿಗಳನ್ನು ಆಯೋಜಿಸಿಕೊಂಡು ಬರುತ್ತಿವೆ. ಆದರೆ, ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಹಿಂದೂ ಸಮಾಜದ ಎಲ್ಲರನ್ನೂ ಸಂಘಟಿಸುವ ಚಿಂತನೆಗಳಡಿ ಹಿಂದೂ ಕ್ರಿಕೆಟ್ ಕಪ್ ಆಯೋಜಿಸುತ್ತಿದೆ. ಪಂದ್ಯಾವಳಿಯಲ್ಲಿ ರಾಜ್ಯವ್ಯಾಪ್ತಿಯ 40 ರಿಂದ 45 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ತಮ್ಮ ಗುರುತಿನ ಐಡಿ ಕಾರ್ಡ್‍ನ್ನು ಹಾಜರು ಪಡಿಸುವುದು ಕಡ್ಡಾಯವಾಗಿದೆ. ಪಂದ್ಯಾವಳಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಆಸಕ್ತ ತಂಡಗಳು ಫೆ.28 ರ ಒಳಗೆ ಮೈದಾನ ಶುಲ್ಕ 3 ಸಾವಿರ ರೂ.ಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು.
ಪಂದ್ಯಾವಳಿ ವಿಜೇತರಿಗೆ ನೀಡಲು ಅತ್ಯಂತ ವಿಶಿಷ್ಟವಾದ ಟ್ರೋಫಿಗಳನ್ನು ಸಿದ್ಧಪಡಿಸಲಾಗಿದೆ. ವಿಜೇತರಿಗೆ 55,555 ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 33,333 ರೂ., ತೃತೀಯ 11,111 ರೂ. ನಾಲ್ಕನೇ ಬಹುಮಾನವಾಗಿ 5,555 ರೂ. ನಗದು ಬಹುಮಾನವನ್ನು ನೀಡಲಾಗುತ್ತದೆಂದು ಮಾಹಿತಿ ನೀಡಿದರು.
ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಪವನ್ ಮೊ.9880490536, ವಿನಯ್ ಮೊ.9900612664, ಭರತ್ ಮೊ.9916262689, ಕಾರ್ಯಪ್ಪ ಮೊ.9449807056 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಹಿಂದೂ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಕೆ.ಆರ್. ಪವನ್, ಸದಸ್ಯರಾದ ಬಿ.ಎಸ್. ಸಂದೀಪ್ ಪೂಜಾರಿ,, ಬಿ.ಡಿ. ಭರತ್ ಕುಮಾರ್, ಒ.ಆರ್. ರಕ್ಷಿತ್ ಉಪಸ್ಥಿತರಿದ್ದರು.
