ಕುಶಾಲನಗರ : ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಸ್ತಾವನೆ
15/02/2023

ಕುಶಾಲನಗರ,ಫೆ.15: ಕುಶಾಲನಗರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಸಂದರ್ಭ ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ಒಂದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿರುವುದಾಗಿ ಕೊಡಗು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಭ್ರoಗೇಶ್ ತಿಳಿಸಿದ್ದಾರೆ.
ಅವರು ಮಡಿಕೇರಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ತಮ್ಮ ಕೊಠಡಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ 52ರ ಜಾಗದಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಎಲ್ಲಾ ಸಿದ್ಧತೆಗಳು ನಡೆದಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿರುವ ತೇಗ ಮತ್ತು ಇತರೆ ಜಾತಿಯ 98 ಮರಗಳನ್ನು ತೆರವುಗೊಳಿಸುವ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಮರ ತೆರವುಗೊಳಿಸುವ ಸಂದರ್ಭ ನಿಯಮಗಳನ್ನು ಪಾಲಿಸುವ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಧೀಶರು, ನೂತನ ಕಟ್ಟಡ ನಿರ್ಮಾಣ ಸಂದರ್ಭ ಅಗತ್ಯವಿರುವ ಕೆಲವು ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪರ್ಯಾಯವಾಗಿ ಒಂದು ಮರಕ್ಕೆ ಹತ್ತು ಗಿಡಗಳಂತೆ ಗಿಡ ನೆಟ್ಟು ಬೆಳೆಸಲು ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸರಕಾರಿ ಅಥವಾ ಸಾರ್ವಜನಿಕ ಜಾಗಗಳನ್ನು ಗುರುತಿಸುವಂತೆ ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳುವುದು, ಅವುಗಳ ನಿರ್ವಹಣೆ ಮಾಡುವುದರೊಂದಿಗೆ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲಾ ರೀತಿಯ ಕ್ರಿಯಾ ಯೋಜನೆ ರೂಪಿಸುವಂತೆ ಅವರು ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಮರ ತೆರವುಗೊಳಿಸುವ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವ ಕುಶಾಲನಗರದ ಎಂ ಎನ್ ಚಂದ್ರಮೋಹನ್ ಅವರ ನದಿ, ಪರಿಸರ ಕಾಳಜಿ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಆಕ್ಷೇಪಣೆಗೆ ಸೂಕ್ತ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ತನ್ನ ಆಕ್ಷೇಪಣೆಯನ್ನು ಹಿಂತೆಗೆಯುವುದಾಗಿ ಚಂದ್ರಮೋಹನ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಡಿಕೇರಿ ವಿಭಾಗದ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಜೀವನ್, ನ್ಯಾಯಾಲಯ ಮುಖ್ಯ ಆಡಳಿತ ಅಧಿಕಾರಿ ಕೆ ಕೆಂಪರಾಜು, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ ವಿ ಶಿವರಾಮ್ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ ನಾಯಕ್, ಇಂಜಿನಿಯರ್ ಸೈಜನ್ ಪೀಟರ್ ಇದ್ದರು.















