ಚೆಂಬು : ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ರಕ್ತದಾನ ಮಾಡುವುದು ಸೂಕ್ತ

ಮಡಿಕೇರಿ ಫೆ.16 – ಚೆಂಬು ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆಯ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಭಗವಾನ್ ಯುವಕ ಸಂಘ ಚೆಂಬು ,ಮಿತ್ರಕೂಟ ಕ್ರೀಡಾ ಸಂಘ ಚೆಂಬು ಇವರ ಸಹಯೋಗದೊಂದಿಗೆ ಮಡಿಕೇರಿಯ ರಕ್ತ ನಿಧಿ ಕೇಂದ್ರದವರು *’ರಕ್ತದಾನ ಶಿಬಿರ’* ಆಯೋಜಿಸಿದ್ದರು.
ಕಾರ್ಯಕ್ರಮವನ್ನು ಚೆಂಬು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕುಸುಮ ಯೋಗೇಶ್ವರ್ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ.ಇಂದಿನ ಕಾಲಮಾನದಲ್ಲಿ ಯುವಕರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವುದು ಬಹಳ ಒಳ್ಳೆಯ ವಿಚಾರ . ಗ್ರಾಮೀಣ ಭಾಗದ ಜನತೆ ಇಂತಹ ಶಿಬಿರದ ಬಗ್ಗೆ ಅರಿವು ಮೂಡಿಸಿ ಕೊಳ್ಳುವುದು ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ।। ಕರುಂಬಯ್ಯ ಕೆ. ಪಿ. , ರಕ್ತದಾನದ ಮಹತ್ವ , ಪ್ರಯೋಜನ ಮತ್ತು ಸಾರ್ಥಕ ಮನೋಭಾವದ ಬಗ್ಗೆ ಅರಿವು ನೀಡಿದರು. ವಿದ್ಯಾರ್ಥಿಗಳು ಬಾಲ್ಯದಲ್ಲೇ ರಕ್ತದಾನದ ಬಗ್ಗೆ ಅರಿತುಕೊಳ್ಳಬೇಕು. ಜೀವನದಲ್ಲಿ ಅವಕಾಶ ಸಿಕ್ಕಾಗ ರಕ್ತದಾನ ಮಾಡಲು ಮುಂದೆ ಬನ್ನಿ .ರಕ್ತದಾನದ ಬಗ್ಗೆ ವಿದ್ಯಾರ್ಥಿಗಳು ಜಾಗೃತಿಯನ್ನು ಉಂಟು ಮಾಡುವ ಕೆಲಸ ಮಾಡಬೇಕು ಎಂದೂ ಕರುಂಬಯ್ಯ ಕಿವಿಮಾತು ಹೇಳಿದರು.
ಚೆಂಬು ಭಗವಾನ್ ಸಂಘದ , ಅಧ್ಯಕ್ಷ ಯತೀಶ್ ಹನಿಯಡ್ಕ ಮಾತನಾಡಿ, ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯದ ಸಮತೋಲನವನ್ನು ಕಾಯ್ದುಕೊಳ್ಳ ಬೇಕಾದರೆ ರಕ್ತದಾನ ಮಾಡುವುದು ಸೂಕ್ತ,ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಯುವಕರು ಇಂತಹ ಕಾರ್ಯದಲ್ಲಿ ಕೈ ಜೋಡಿಸುವದು ಒಂದು ಪುಣ್ಯದ ಕೆಲಸ.
ನಾವು ನೀಡುವ ರಕ್ತ ಒಂದು ಜೀವದ ಉಳಿವಿಗೆ ಸಹಕಾರಿಯಾಗುತ್ತದೆ. ರಕ್ತದಾನ ಮಾಡುವ ಬಗ್ಗೆ ಇರುವ ಮೂಢ ನಂಬಿಕೆ ಇಂದ ದೂರ ಇರಬೇಕು.
.ಹಲವು ವರ್ಷಗಳ ಹಿಂದೆ ರೋಗಿಗಳಿಗೆ ರಕ್ತ ಬೇಕೆಂದಾಗ ರಕ್ತ ನೀಡುವವರಿಗೆ ಹಣ ಕೊಟ್ಟು ಪಡೆಯುವ ಪರಿಸ್ಥಿತಿ ಇತ್ತು ಆದರೆ ಇಂದು ಅ ವ್ಯವಸ್ಥೆ ಬದಲಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಚೆಂಬು ಮಿತ್ರ ಕೂಟ ಕ್ರೀಡಾ ಸಂಘ ಅಧ್ಯಕ್ಷ ಪ್ರಶಾಂತ್ ಊರುಬೈಲು ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ಆಯೋಜಿಸಿದ ಕಾರ್ಯಕ್ರಮ ಸೂಕ್ತವಾದದ್ದಾಗಿದೆ. ರಕ್ತದ ಬಣ್ಣ ಹೇಗೆ ಒಂದೇ ರೀತಿ ಇದೆಯೋ ಹಾಗೆಯೇ ಎಲ್ಲರೂ ಒಗ್ಗಟ್ಟಿನ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧನಂಜಯ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಚೆಂಬು ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿನಿ .ಪವಿತ್ರ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಕೆ ಬಿ ನಿರೂಪಿಸಿ ಸ್ಕೌಟ್ ಮಾಸ್ಟರ್ ರಂಜಿತ್ ಕೆ ಯು ವಂದಿಸಿದರು. ಶಿಬಿರದಲ್ಲಿ ಶಿಕ್ಷಕರು,ಪೊಲೀಸ್ ಇಲಾಖೆಯವರು, ಶಾಲಾ ಎಸ್. ಡಿ. ಎಂ. ಸಿ ಸಮಿತಿ ಪ್ರಮುಖರು, ಗ್ರಾಮಪಂಚಾಯತಿ ಸಿಬ್ಬಂದಿ ಗಳು, ವಿದ್ಯಾರ್ಥಿಗಳು, ಗ್ರಾಮಸ್ತರು ಉಪಸ್ಥಿತ ರಿದ್ದರು .
