ಫೆ.26 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನ

ಮಡಿಕೇರಿ ಫೆ.16 : ಭಾರತೀಯ ಬೌದ್ಧ ಮಹಾಸಭಾ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಫೆ.26 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನ ನಡೆಯಲಿದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವರಾಜ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಮೈಸೂರಿನ ಪುರಭವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವರ ಮೊಮ್ಮಗ ಡಾ.ಭೀಮ್‍ರಾವ್ ಯಶವಂತರಾವ್ ಅಂಬೇಡ್ಕರ್ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ರಾಷ್ಟ್ರೀಯ ಹಾಗೂ ರಾಜ್ಯದ ಸಮತಾ ಸೈನಿಕ ದಳದ ಸದಸ್ಯರಿಂದ ಧಮ್ಮ ನಡಿಗೆ ಪಥಸಂಚಲನ ವೇದಿಕೆಯವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ 11.30ಕ್ಕೆ ಮೈಸೂರಿನ ಲಲಿತ ಮಹಲ್ ಅರಮನೆ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೌದ್ಧ ಬಿಕ್ಕುಗಳು ಹಾಗೂ ಡಾ.ಭೀಮ್‍ರಾವ್ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬುದ್ಧ ಧಮ್ಮ ಕೃತಿಗಳ ಬಿಡುಗಡೆಯಾಗಲಿದ್ದು, ನಂತರ ಧಮ್ಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಸುಮಾರು 20 ಸಾವಿರದಿಂದ 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಪ್ಪ ಇದ್ದರು.
