ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ

ಶನಿವಾರಸಂತೆ ಫೆ.16 : ನಿಡ್ತ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಕಲಿಕಾ ಚೇತರಿಕೆಯ ಅಂಗವಾಗಿ ಮಕ್ಕಳ ಸಂತೆ ನಡೆಯಿತು.
ಮಕ್ಕಳ ಸಂತೆಯಲ್ಲಿ ಚಿಣ್ಣರು ತಮ್ಮ ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರೆ ಮತ್ತೆ ಕೆಲವು ಮಕ್ಕಳು ಪೋಷಕರ ಸಹಾಯದಿಂದ ಬೇರೆ ಕಡೆಯಿಂದ ತಂದ ತರಕಾರಿ, ಹಣ್ಣು ಹಂಪಲು,ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ತಂದು ಮಾರಾಟ ಮಾಡಿದರು.
ಚಿಣ್ಣರ ಸಂತೆಯಲ್ಲಿ ತರಕಾರಿ, ಸೊಪ್ಪು, ಗೆಡ್ಡೆ ಗೆಣಸು, ಹಣ್ಣು ಹಂಪಲು, ತಿಂಡಿ ತಿನಿಸು ಸೇರಿದಂತೆ ಜ್ಯೂಸ್, ಪಾನಿಪೂರಿ, ಗೂಬಿ ಮಂಚೂರಿ ಮಳಿಗೆ ಮಾಡಿಕೊಂಡು ವ್ಯಾಪಾರ ಮಾಡಿದರು. ಸಂತೆಯಲ್ಲಿ ಮಾರಾಟ ಮಾಡುವ ಬೆಲೆಗೆ ಚಿಣ್ಣರು ತಾವು ತಂದ ವಸ್ತುಗಳನ್ನು ಮಾರಾಟ ಮಾಡಿದರು.
ಮಕ್ಕಳ ಸಂತೆಯಲ್ಲಿ ಪೋಷಕರು ಅಕ್ಕ ಪಕ್ಕದ ಜನರು ಗ್ರಾಹಕರಾಗಿ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಶಾಲೆಯ 8 ರಿಂದ 10ನೇ ತರಗತಿಯ ಮಕ್ಕಳು ಸಂತೆಯಲ್ಲಿ ಪಾಲ್ಗೊಂಡು ಮುಂಜಾನೆಯಿಂದ ಸಂಜೆಯವರೆಗೆ ಪಾಲ್ಗೊಂಡರು.
ಜಿ.ಪಂ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ವ್ಯವಹಾರದ ಜ್ಞಾನ ಇದ್ದರೆ ಭವಿಷ್ಯದಲ್ಲಿ ವ್ಯಾಪಾರ, ವ್ಯವಹಾರ ನಡೆಸಲು ದಾರಿ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ ಆಯೋಜನೆ ಮಾಡಿರುವುದು ಶ್ಲಾಘನಿಯ ಎಂದರು.
ಮುಖ್ಯ ಶಿಕ್ಷಕಿ ರೂಪ ಮಾತನಾಡಿ, ವ್ಯಾಪಾರಗಳಲ್ಲಿ ಮೋಸ, ವಂಚನೆ ಹೆಚ್ಚಾಗಿ ನಡೆಯುತ್ತಿರುವುದನ್ನು ನಾವು ಕಾಣುತ್ತೆವೆ. ಕಡಿಮೆ ಬೆಲೆಯ ವಸ್ತಗಳಿಗೆ ದುಬಾರಿ ಬೆಲೆ ಪಡೆಯುವುದು ಸೇರಿದಂತೆ, ಗುಣ ಮಟ್ಟವನ್ನು ನಾವು ಪರೀಕ್ಷೆ ಮಾಡಿಕೊಳ್ಳಬೇಕು. ಯಾವುದೇ ವಸ್ತುವನ್ನು ಖರೀದಿಸಿದರು ಸಹ, ನಾವು ಅಂಗಡಿಯಲ್ಲಿ ಪಡೆದುಕೊಳ್ಳುವ ವಸ್ತುವಿಗೆ ನೀಡುವ ಬೇಲೆಗೆ ರಶೀದಿಯನ್ನು ಪಡೆದುಕೊಳ್ಳಬೇಕು. ನಾವು ಪಡೆದುಕೊಂಡಿರುವ ವಸ್ತುವಿನಲ್ಲಿ ನಮಗೆ ಅಂಗಡಿಯಲ್ಲಿ ಅನ್ಯಾಯವಾಗಿದ್ದರೆ ಗ್ರಾಹಕ ನ್ಯಾಯಲಯದಲ್ಲಿ ನಾವು ದೂರು ಸಲ್ಲಿಸ ಬಹುದಾಗಿದೆ ಎಂದರು.
ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಮನೋಹರ್ ಮಾತನಾಡಿ ವಿದ್ಯಾರ್ಥಿಗಳ ವ್ಯವಹಾರ ಜ್ಞಾನ ಮತ್ತು ಅನುಭವಕ್ಕೆ ಶಾಲೆಗಳಲ್ಲಿ ಆಯೋಜಿಸುವ ಮಕ್ಕಳ ಸಂತೆ ಪೂರಕ ವೇದಿಕೆಯಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪಠ್ಯ, ಕ್ರೀಡೆ ಚಟುವಟಿಕೆಯ ಜೊತೆಯಲ್ಲಿ ವ್ಯವಹಾರಿಕ ಅನುಭವಗಳನ್ನು ಪಡೆದುಕೊಂಡು ವ್ಯವಹಾರ ಜ್ಞಾನ ಹೊಂದುವಂತೆ ಸಲಹೆ ನೀಡಿದರು.
ವಿದ್ಯಾರ್ಥಿ ಪುನೀತ್ ಮಾತನಾಡಿ, ನಮಗೆ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿಯಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ನಾವು ಮಾರುಕಟ್ಟೆಗಲ್ಲಿ ಯಾವ ರೀತಿ ಮೋಸ ಹೋಗುತ್ತಿದ್ದೇವೆ ಎಂದು ತಿಳಿಯಿತು. ವಿನ ಕಾರಣ ನಾವು ಕೆಲ ವಸ್ತುಗಳಿಗೆ ದುಬಾರಿ ಮೊತ್ತ ನೀಡುತ್ತಿದ್ದೆವು ಎಂದರು.
ವಿದ್ಯಾರ್ಥಿನಿ ಅಪರ್ಣ ಮಾತನಾಡಿ, ಇಂದು ನಿಡ್ತ ಸಂತೆ ಉತ್ತಮವಾಗಿ ನಡೆದಿದೆ. ಇಲ್ಲಿ ಎಲ್ಲಾ ಬಗೆಯ ತರಕಾರಿ, ಹಣ್ಣು ಹಂಪಲು ಸೇರಿದಂತೆ ಪಾನಿ ಪುರಿ, ಮಸಾಲೆ ಪುರಿ ಸೇರಿದಂತೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರು ಉತ್ತಮ ರೀತಿಯಲ್ಲಿ ನಮ್ಮ ವ್ಯಾಪಾರಕ್ಕೆ ಸ್ಪಂದಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಕವಿತ, ಶಾಲಾ ನಾಮನಿರ್ದೇಶಿತ ಸದಸ್ಯ ಸುಬ್ಬಪ್ಪ, ನಿಡ್ತ ಗ್ರಾ.ಪಂ ಸದಸ್ಯ ಕಾರ್ತಿಕ್, ಶಿಕ್ಷಕಿ ಪ್ರಿಯಾಂಕ ಇತರರಿದ್ದರು.
ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ)
