ಗದ್ದೆಹಳ್ಳ ಸರಕಾರಿ ಶಾಲೆಯ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ

ಸುಂಟಿಕೊಪ್ಪ,ಫೆ.16: ದೂರದೃಷ್ಟಿ ಮತ್ತು ಪ್ರಾಮಾಣಿಕತೆಯಿಂದ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ಕೊಡಗು ಜಿ.ಪಂ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸರಕಾರಿ ಶಾಲೆ ಶಿಕ್ಷಣದ ಗುಣಮಟ್ಟ, ಮಕ್ಕಳಲ್ಲಿ ಲೋಕ ಜ್ಞಾನ, ಸಂಸ್ಕೃತಿ, ಸಂಸ್ಕಾರ ಕಲಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರತಿಯೊಬ್ಬರೂ ತಮ್ಮ ಕೆಲಸಗಳಲ್ಲಿ ಒಳ್ಳೆಯ ಉದ್ದೇಶ ಹೊಂದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿಶ್ಲೇಷಿದ ಅವರು ಜೀವನದಲ್ಲಿ ವಿವೇಚನೆ, ಪ್ರಾಮಾಣಿಕ ಪ್ರಯತ್ನಗಳು ಮುಖ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಶಾಲೆಗೆ 23 ವರ್ಷಗಳ ಇತಿಹಾಸವಿದ್ದು, ಶಾಲೆಯ ಆವರಣ ಮತ್ತು ಬೆಳೆದು ಬಂದ ವಿವರವಾದ ಮಾಹಿತಿಯನ್ನು ನೀಡಿದರು. ಶಾಲೆಗೆ ಅತೀ ಅವಶ್ಯಕವಾಗಿರುವ ಮೂಲ ಸೌಲಭ್ಯಗಳ ಬಗ್ಗೆ ಬೇಡಿಕೆಯನ್ನು ಸಲ್ಲಿಸಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಮಹೇಶ್ ಉದ್ಘಾಟಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ಸ್ಥಳದಾನಿಗಳಾದ ಪಟ್ಟೆಮನೆ ದಿವಂಗತ ಮಾದಯ್ಯನವರ ಪತ್ನಿ ಕಾವೇರಮ್ಮ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ತಿಮ್ಮಪ್ಪ,ಮೇಟಿಲ್ಡ, ಮಿನಾಕ್ಷಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬಲ್ಕೀಸ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸ್ಯಾಂಡಲ್ ವುಡ್ ಕಾಫಿ ತೋಟ ಮಾಲೀಕರಾದ ಜಾವಿದ್, ಸುಂಟಿಕೊಪ್ಪ ಕ್ಲಸ್ಟರ್ ಅಧಿಕಾರಿ ಸೀಮಾ, ಗ್ರಾ.ಪಂ ಸದಸ್ಯರುಗಳಾದ ಪಿ.ಆರ್.ಸುನೀಲ್ ಕುಮಾರ್, ಪಿ.ಎಫ್.ಸಬಾಸ್ಟೀನ್, ರಫೀಕ್ ಖಾನ್, ನಾಗರತ್ನ ಸುರೇಶ್, ಗೀತಾ, ಗದ್ದೆಹಳ್ಳದ ಅಮ್ಮೆಟಿ ಯೂತ್ ಕ್ಲಬ್ ನ ಅಧ್ಯಕ್ಷ ರಶೀದ್, ಇಚ್ಚಾ ರಶೀದ್, ನಿವೃತ್ತ ಮುಖ್ಯ ಶಿಕ್ಷಕರುಗಳಾದ ತಿಮ್ಮಪ್ಪ,ಮೇಟಿಲ್ಡ, ಮಿನಾಕ್ಷಿ, ಗ್ರಾಮಸ್ಥರಾದ ಪುಪಷ್ಪೇಂದ್ರ, ಸಣ್ಣ ಶಾಲಾ ಮುಖ್ಯೋಪದ್ಯಾಯಿನಿ ಹೇಮಾಕುಮಾರಿ, ಸಹ ಶಿಕ್ಷಕರುಗಳಾದ ಶೈಲಾ ಜಾಯ್, ಮೀನಾ ಕುಮಾರಿ, ಅನಿತಾ, ಉಷಾ ಕುಮಾರಿ ವೇದಿಕೆಯಲ್ಲಿ ಇದ್ದರು.
