ಮಡಿಕೇರಿ ಆಕಾಶವಾಣಿಯಲ್ಲಿ ರೇಡಿಯೋ ಕಿಸಾನ್ ದಿನಾಚರಣೆ : ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆ ಸದುಪಯೋಗಕ್ಕೆ ಕರೆ

ಮಡಿಕೇರಿ ಫೆ.16 : ಅಂತಾರ್ಜಾಲದ ತೊಡಕು ಇರುವ ಕೊಡಗಿನಲ್ಲಿ ರೇಡಿಯೋ ಪರಿಣಾಮಕಾರಿಯಾಗಿ ಸುದ್ದಿಯನ್ನು ಮುಟ್ಟಿಸುತ್ತಿದ್ದು, ಸರ್ಕಾರಿ ಇಲಾಖೆಗಳನ್ನೂ ಸೇರಿಕೊಂಡು ಖಾಸಗಿ ಸಂಸ್ಥೆಗಳಿಗೂ ಪ್ರಯೋಜನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ ಶೇಕ್ ನುಡಿದರು. ಮಡಿಕೇರಿ ಆಕಾಶವಾಣಿ ಕೇಂದ್ರವು ಹಮ್ಮಿಕೊಂಡ ರೇಡಿಯೋ ಕಿಸಾನ್ ದಿನದ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕೃಷಿಕರಿಗೆ ಉಪಯುಕ್ತವಾದ ವಿಚಾರಗಳು ಪ್ರಸಾರವಾಗುತ್ತಿದೆ. ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಯನ್ನು ತಿಳಿಸಲು ಅನುಕೂಲವಾಗಿದೆ. ಇತರೇ ಜಿಲ್ಲೆಗಳಿಗಿಂತ ಕೊಡಗಿನ ಪರಿಸರ ಭಿನ್ನವಾಗಿದೆ. ಇಲ್ಲಿಯೂ ಸಾಧಕ ರೈತರು ಇದ್ದಾರೆ. ಕೃಷಿ ಇಲಾಖೆಯು ಹಾಲಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಗೆ ರೈತರು ನೋಂದಾಯಿಸಿಕೊಂಡು ಪ್ರಯೋಜನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಕೊಡಗು ಜಿ.ಪಂ ಉಪ ಕಾರ್ಯದರ್ಶಿ ಜಿ. ಧನರಾಜ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಅಡಿ ನೂರಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಇದೆ. ರೈತರ ಹತ್ತಾರು ಕೆಲಸಗಳಿಗೆ ಈ ಮೂಲಕ ಸಹಾಯವಾಗಲಿದೆ ಎಂದರು. ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ವಿಜಯ್ ಅಂಗಡಿ ಪ್ರಾಸ್ತವಿಕವಾಗಿ ಮಾತನಾಡಿ, 1965 ರಿಂದ ಕೃಷಿ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿವೆ. ರೈತರಿಗೆ ಪ್ರತೀ ದಿನವೂ ಕೃಷಿ ಕುರಿತ ಮಾಹಿತಿಯನ್ನು ನೀಡಲಾಗುತ್ತಿದೆ. 2004ರ ಫೆಬ್ರವರಿ 15 ರಂದು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಕೃಷಿ ಕಾರ್ಯಕ್ರಮಗಳ ಪ್ರಸಾರವು ನೆಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ 15 ರಂದು ರೇಡಿಯೋ ರೈತ ದಿನವನ್ನು ಆಚರಿಸಲಾಗುತ್ತಿದೆ ಎಂದರು. ದೇಶದಲ್ಲಿ 96 ಆಕಾಶವಾಣಿ ಕೇಂದ್ರಗಳಿಂದ ಕಿಸಾನ್ ವಾಣಿ ಪ್ರಾಯೋಜಿತ ಕಾರ್ಯಕ್ರಮಗಳು ಮೂಡಿಬರುತ್ತಿದ್ದು, ರೈತರಿಗೆ ಹತ್ತಾರು ಸಂಗತಿಗಳು ಸಿಗುವಂತಾಗಲು ಪ್ರಸಾರದ ಸಂಯೋಜನೆ ಮಾಡಲಾಗಿದೆ. ರೈತರಿಗೆ ರೇಡಿಯೋ ಈಗಲೂ ನೆಚ್ಚಿನ ಮಧ್ಯಮವಾಗಿದೆ ಎಂದು ತಿಳಿಸಿದರು. ರೇಡಿಯೋ ಕಿಸಾನ್ ದಿವಸದ ನಿಮಿತ್ತ ಎಂ.ಬಾಡಗ ಗ್ರಾಮದ ಬಾರಿಯಂಡ ಸಂಜನ್ ಪೊನ್ನಪ್ಪ, ಮೈತಾಡಿಯ ಎಚ್ ಕೆ ಹನೀಫ್, ಚೇರಂಗಾಲದ ಮೂಲೆಮಜಲು ಗಣೇಶ್ ಹಾಗೂ ಗರಂಗದೂರಿನ ಕೆ.ಎಸ್ ಮಂಜುನಾಥ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ರೈತ ಹನೀಫ್ ಅವರು ಮಾತನಾಡಿ, ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮಗಳು ನಮ್ಮ ಜೀವನವನ್ನು ಬದಲಿಸುತ್ತವೆ. ಸ್ಫೂರ್ತಿ ನೀಡುತ್ತವೆ ಎಂದರು. ಕೆಲಸಗಳ ಒತ್ತಡದಲ್ಲೂ ಆಗಮಿಸಿದ ಜಿಲ್ಲಾ ಪಂಚಾಯತ್ ನ ಸಿ ಇ ಒ ಡಾ.ಎಸ್.ಆಕಾಶ್ ಅವರು ರೈತರಿಗೆ ಶುಭ ಕೋರಿದರು. ಸಂಜೆ 6.50 ರಿಂದ ನೇರ ಪ್ರಸಾರದಲ್ಲಿ ಅಭಿನಂದಿಸಿದ ರೈತರ ಅಭಿಪ್ರಾಯಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಕಾಶವಾಣಿಯ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ, ಆನಂದನ್, ಶಿವಾನಂದನ್, ಪಂಕಜ್ ಕುಡ್ತರ್ ಕರ್ ಹಾಗೂ ಸಿಬ್ಬಂದಿ ಇದ್ದರು. ರೈತ ಕುಟುಂಬದ ಸದಸ್ಯರೂ ಆಗಮಿಸಿದ್ದುದು ವಿಶೇಷವಾಗಿತ್ತು.ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನಲೆಯಲ್ಲಿ ರಾಗಿ ಅಂಬಲಿಯ ಜೊತೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ರೈತರಿಗೆ ಚಕ್ರಮುನಿ, ಲೆಮನ್ ಗ್ರಾಸ್, ಪೆಪ್ಪರ್ ಮಿಂಟ್, ಪಟಾವಳಿ ಕಬ್ಬಿನ ಗಿಡಗಳನ್ನೂ ಕಾಣಿಕೆಯಾಗಿ ಕೊಡಲಾಯಿತು. ಲೆಮನ್ ಗ್ರಾಸ್ ನ ಪಾನೀಯ ವನ್ನು ಪರಿಚಯಿಸಲಾಯಿತು.
