ಮಡಿಕೇರಿಯಲ್ಲಿ ಬಿಸಿಯೂಟ ನೌಕರರ ಪ್ರತಿಭಟನೆ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಮಡಿಕೇರಿ ಫೆ.17 : ಹೋರಾಟದ ಸಂದರ್ಭ ಬಿಸಿಯೂಟದ ನೌಕರರನ್ನು ಬೆಂಗಳೂರಿನಲ್ಲಿ ತಡೆದು ಬಂಧಿಸಿದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿ.ಐ.ಟಿ.ಯು ನೇತೃತ್ವದಲ್ಲಿ ಕೊಡಗು ಜಿಲ್ಲಾ ಬಿಸಿಯೂಟ ನೌಕರರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಮೀಳಾ ಮಾತನಾಡಿ, ಇಂದಿನ ಸರ್ಕಾರ ಹೆಣ್ಣು ಮಕ್ಕಳನ್ನು ಬೀದಿಗೆ ತಳ್ಳಿದೆ. ಬೆಳಗ್ಗೆ 9 ಗಂಟೆಗೆ ಶಾಲೆಗೆ ತೆರಳಿದರೆ, ಸಂಜೆ 4 ಗಂಟೆಗೆ ಮನೆಗೆ ಹಿಂದಿರುಗುತ್ತೇವೆ. ಆದರೆ, ಸರ್ಕಾರ ನಮಗೆ ರೂ.3,600 ರಿಂದ 3,700 ಮಾತ್ರ ಗೌರವ ಧನ ನೀಡುತ್ತದೆ. ಈ ವೇತನದಲ್ಲಿ ಜೀವನ ಹೇಗೆ ಸಾಗಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ತಿಂಗಳ ವೇತನ ಕೂಡ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಸರ್ಕಾರ ನಮ್ಮನ್ನು ಕಡಿಗಣಿಸಿದೆ ಎಂದು ದೂರಿದರು.
ಸರ್ಕಾರ ನಮ್ಮ ಕೆಲಸದ ಸಮಯ ವಿಸ್ತರಣೆ ಮಾಡಿದರೂ ಸಮಸ್ಯೆಯಿಲ್ಲ. ಆದರೆ, ಹೆಚ್ಚಿನ ವೇತನ ನೀಡಲಿ. 20 ವರ್ಷದಿಂದ ಕಾರ್ಯನಿರ್ವಹಿಸಿದರೂ ವೇತನ ಹೆಚ್ಚಳವಿಲ್ಲ. ಕೆಲವು ನೌಕರರನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಲಾಗಿದೆ. ಇಂತಹ ನಿರ್ಧಾರ ಖಂಡನೀಯ ಎಂದ ಅವರು, 60 ವರ್ಷ ಮೇಲ್ಪಟ್ಟ ನೌಕರರಿಗೆ ಹಿಡಿಗಂಟು ನೀಡಬೇಕು. ಕನಿಷ್ಠ 6000 ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಪ್ರತಿಭಟನೆ ಸಂದರ್ಭ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿ, ಹೋರಾಟ ಮಾಡಬಾರದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ರಕ್ಷಣೆಯಿಲ್ಲದಾಗಿದೆ. ಇಂದು ಬೀದಿಯಲ್ಲಿ ನಿಲ್ಲುವಂತಾಗಿದೆ. ಶಾಲೆಯ ಮಕ್ಕಳನ್ನು ಮಾತ್ರ ನಾವು ನೋಡುವುದಾದರೆ ನಮ್ಮ ಮಕ್ಕಳ ರಕ್ಷಣೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಸಂಘದ ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಜಯಂತಿ, ಕುಶಾಲನಗರ ತಾಲೂಕು ಅಧ್ಯಕ್ಷೆ ಚಾಮುಂಡಿ, ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
