ಶ್ರೀ ಮುನೀಶ್ವರ ಯುವಕ ಸಂಘದಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಮಡಿಕೇರಿ ಫೆ.17 : ನಗರದ ಶ್ರೀ ಮುನೀಶ್ವರ ಯುವಕ ಸಂಘ ಮತ್ತು ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಫೆ.18 ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ಅಕಾಲಿಕವಾಗಿ ನಿಧನರಾದ ಸುದರ್ಶನ ಬಡಾವಣೆಯ ನಿವಾಸಿಗಳಾದ ಪಂದಿಯಂಡ ಆಶಾ, ರೋಶನ್ ಶೆಟ್ಟಿ ಹಾಗೂ ಶಶಾಂಕ್ ಗೌಡ ಅವರ ಸ್ಮರಣಾರ್ಥ ಎ.ಆರ್.ಎಸ್. ಮೆಮೋರಿಯಲ್ ಟ್ರೋಫಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಮುನೀಶ್ವರ ದೇವಸ್ಥಾನದ ಕ್ರೀಡಾ ಮೈದಾನದಲ್ಲಿ ಸಂಜೆ 7 ಗಂಟೆಗೆ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ವಾರ್ಡ್‍ನ ನಗರಸಭಾ ಸದಸ್ಯರುಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.
ಕ್ರೀಡಾ ಪ್ರೇಮಿಗಳಿಗಾಗಿ 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಮಾಜ ಸೇವಕ ಡಾ.ಮಂತರ್ ಗೌಡ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟಕ್ಕೆ ಈಗಾಗಲೇ 12 ತಂಡಗಳು ನೋಂದಾಯಿಸಿಕೊಂಡಿವೆ. ಕೇರಳ, ಬೆಂಗಳೂರು, ಮಂಗಳೂರು, ಸುಳ್ಯ, ತಮಿಳುನಾಡು, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆಯಿಂದ ತಂಡಗಳು ಆಗಮಿಸಲಿವೆ.
ಪ್ರಥಮ ಬಹುಮಾನ ರೂ.50 ಸಾವಿರ ನಗದು, ದ್ವಿತೀಯ ಬಹುಮಾನ ರೂ.30 ಸಾವಿರ ನಗದು, ತೃತೀಯ ಹಾಗೂ ಚತುರ್ಥ ತಲಾ ರೂ.10ಸಾವಿರ ನಗದು ಮತ್ತು ವಿವಿಧ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
:: ವಿಶೇಷ ಪೂಜೆ ::
ಶಿವರಾತ್ರಿ ಪ್ರಯುಕ್ತ ಶ್ರೀ ಮುನೀಶ್ವರ ದೇವಾಲಯದಲ್ಲಿ ಸಂಜೆ 7 ಗಂಟೆಗೆ ವಿಶೇಷ ಪೂಜೆ ಜರುಗಲಿದ್ದು, ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮುನೀಶ್ವರ ದೇವಾಲಯದ ಉಪಾಧ್ಯಕ್ಷ ಕಾವೇರಪ್ಪ, ಖಜಾಂಚಿ ವಾಸು, ಸಂಘದ ಸಲಹೆಗಾರ ಅಂಬೆಕಲ್ ನವೀನ್, ಪದಾಧಿಕಾರಿಗಳಾದ ಎನ್.ಎನ್.ಕೌಶಿಕ್ ಹಾಗೂ ಎಂ.ಎ.ಸತೀಶ್ ಉಪಸ್ಥಿತರಿದ್ದರು.
