Advertisement
8:53 AM Sunday 3-December 2023

ವಿಧಾನಸಭಾ ಚುನಾವಣೆ : ಅಂತರ ರಾಜ್ಯ ಗಡಿ ಪ್ರದೇಶದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಿ : ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್

17/02/2023

ಮಡಿಕೇರಿ ಫೆ.17 : ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಅಂತರರಾಜ್ಯ ಗಡಿ ಪ್ರದೇಶದಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ಅಬಕಾರಿ ವಿಭಾಗದ ಜಂಟಿ ನಿರ್ದೇಶಕರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಮಾಲೋಚನಾ ಸಭೆಯು ನಡೆಯಿತು.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯ ಗಡಿಭಾಗದ ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲಾ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕಿದೆ. ಆ ನಿಟ್ಟಿನಲ್ಲಿ ಎರಡು ರಾಜ್ಯಗಳ ಅಬಕಾರಿ ಇಲಾಖೆಯ ಅಧಿಕಾರಿಗಳು ಅಗತ್ಯ ಸಹಕಾರ ನೀಡುವಂತೆ ಕೋರಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡದೆ ಸುಗಮ ಹಾಗೂ ಶಾಂತಿಯುತವಾಗಿ ವಿಧಾನಸಭೆ ಚುನಾವಣೆ ನಡೆಸಲು ಅಂತರ ರಾಜ್ಯ ಗಡಿ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಈಗಾಗಲೇ ಪೆರುಂಬಾಡಿಯಲ್ಲಿ ಅಬಕಾರಿ ಇಲಾಖೆಯ ಚೆಕ್‍ಪೋಸ್ಟ್ ಇದ್ದು, ಕುಟ್ಟ ಮತ್ತು ಮಾಕುಟ್ಟದಲ್ಲಿ ಕೋವಿಡ್ ಸಂದರ್ಭದಲ್ಲಿ ನಿರ್ಮಾಣವಾಗಿದ್ದ ಕಂಟೈನರ್ ಮಳಿಗೆಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಟಿ.ನಾಗರಾಜಪ್ಪ ಅವರು ಮಾತನಾಡಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಗಡಿ ಹೊಂದಿಕೊಂಡಿರುವ ಕಾಸರಗೋಡು, ಕಣ್ಣೂರು, ವಯನಾಡು ಜಿಲ್ಲೆಗಳು ಬರಲಿದ್ದು, ಈ ಅಂತರರಾಜ್ಯ ಗಡಿ ಪ್ರದೇಶದಲ್ಲಿ ಎರಡು ರಾಜ್ಯಗಳ ಅಬಕಾರಿ ಇಲಾಖೆ ಅಧಿಕಾರಿಗಳು ‘ಜಂಟಿ ಕಾರ್ಯಾಚರಣೆ’ ಕೈಗೊಳ್ಳಬೇಕು ಎಂದರು.
ಯಾವುದೇ ರೀತಿಯ ಮಾದಕ ವಸ್ತುಗಳು, ಅಬಕಾರಿ ವಸ್ತುಗಳ ಕಳ್ಳಸಾಗಾಣಿಕೆಗೆ ಅವಕಾಶ ಮಾಡಬಾರದು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಹೆಚ್ಚಿನ ನಿಗಾವಹಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಾತನಾಡಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಲಾಗುವುದು. ಪೊಲೀಸ್ ಇಲಾಖೆಯೊಂದಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಕೈಜೋಡಿಸಿ, ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಅಬಕಾರಿ ಇಲಾಖೆಯ ಕೊಡಗು ಜಿಲ್ಲಾ ಉಪ ಆಯುಕ್ತರಾದ ಜಗದೀಶ್ ನಾಯಕ್ ಅವರು ಮಾಹಿತಿ ನೀಡಿ, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕುಟ್ಟ, ಮಾಕುಟ್ಟ, ಕರಿಕೆ ಭಾಗದ ಚೆಕ್‍ಪೋಸ್ಟ್‍ಗಳು ಅಂತರರಾಜ್ಯ ಗಡಿ ವ್ಯಾಪ್ತಿಗೆ ಬರಲಿದ್ದು, ಈ ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ರೀತಿಯ ಅಬಕಾರಿ ಅಕ್ರಮಗಳ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರ ವಹಿಸಲಾಗುತ್ತದೆ. ಆ ನಿಟ್ಟಿನಲ್ಲಿ ನೆರೆ ರಾಜ್ಯದವರು ಸಹಕಾರ ನೀಡುವಂತಾಗಬೇಕು ಎಂದರು.
ಚುನಾವಣಾ ಸಂದರ್ಭದಲ್ಲಿ ಅಬಕಾರಿ ಚೆಕ್ ಪೋಸ್ಟ್‍ನಲ್ಲಿ ಅಬಕಾರಿ ಇನ್ಸ್‍ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್, ಆರು ಮಂದಿ ಕಾನ್ಸ್‍ಟೇಬಲ್‍ಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಕೇರಳ ರಾಜ್ಯದ ಗಡಿ ಜಿಲ್ಲೆಯ ಉಪ ಅಬಕಾರಿ ಆಯುಕ್ತರಾದ ಕೆ.ಎಸ್.ಶಾಜಿ(ವಯನಾಡು), ಕೆ.ಪ್ರೇಮ ಕೃಷ್ಣ(ಕಣ್ಣೂರು), ಸಹಾಯಕ ಅಬಕಾರಿ ಆಯುಕ್ತರಾದ ಜಾಯ್ ಜೋಸೆಫ್(ಕಾಸರಗೋಡು) ಅವರು ಮಾತನಾಡಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಂತರರಾಜ್ಯ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಅಬಕಾರಿ ಅಕ್ರಮಗಳು ನಡೆಯದಂತೆ ಗಮನಹರಿಸಲಾಗುವುದು. ಆ ನಿಟ್ಟಿನಲ್ಲಿ ಶಾಂತಿಯುತ ಚುನಾವಣೆಗೆ ಸಹಕರಿಸಲಾಗುವುದು ಎಂದರು.
ಕೊಡಗು, ದಕ್ಷಿಣ ಕನ್ನಡ, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಅಬಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಲಕ್ಷ್ಮೀಶ ನಿರೂಪಿಸಿ, ವಂದಿಸಿದರು.