Advertisement
1:32 AM Thursday 7-December 2023

ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ: ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ : ಎ.ಎಸ್ ಪೊನ್ನಣ್ಣ

20/02/2023

ಮಡಿಕೇರಿ ಫೆ.20 :   ಪ್ರಸ್ತುತ ದಿನಗಳಲ್ಲಿ  ಸಮಾಜದಲ್ಲಿ ನಿರ್ಮಾಣವಾಗಿರುವ ಎಲ್ಲಾ ಅಂತರವನ್ನು ಒಂದುಗೂಡಿಸುವ‌ ಅಪಾರ ಶಕ್ತಿ  ಕ್ರೀಡೆಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ‌ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.

ಅಯ್ಯಂಗೇರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಎ.ಎಸ್ ಪೊನ್ನಣ್ಣ ಸಿಕ್ಸರ್ ಬಾರಿಸುವ  ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೊಡಗು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಹಲವಾರು ಯುವ ಕ್ರೀಡಾಪಟುಗಳು ಇದ್ದಾರೆ. ಗ್ರಾಮ ಮಟ್ಟದಲ್ಲಿ ಸರಿಯಾದ ಕ್ರೀಡಾ ಸೌಕರ್ಯಗಳು ಇಲ್ಲದೆ, ಕ್ರೀಡಾ ಕ್ಷೇತ್ರದಲ್ಲಿ ಮುಂದವರಿಯಲು ಸಾಧ್ಯವಾಗುತ್ತಿಲ್ಲ.
ಕೊಡಗು ಜಿಲ್ಲೆ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಆದರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಬೇಕಾದ ಸೌಲಭ್ಯಗಳ ಕೊರತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಎ.ಎಸ್.ಪೊನ್ನಣ್ಣ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗದ್ದೆಗಳನ್ನು ಮೈದಾನವನ್ನಾಗಿ ನಿರ್ಮಿಸಿ ಆಟ ಆಡುವ ಪರಿಸ್ಥಿತಿ ಇದೆ ಎಂದು  ಹೇಳಿದರು.

ಗ್ರಾಮೀಣ ಭಾಗದಲ್ಲಿ ಆಟ ಆಡಲು ಮೈದಾನ, ಕ್ರೀಡಾ ಸೌಕರ್ಯಗಳು ನೀಡಿದರೆ, ಹೆಚ್ಚಿನ‌ ಸಂಖ್ಯೆಯಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಗ್ರಾಮೀಣ ಭಾಗದ ಪ್ರತಿಭೆಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡಾಕೂಟವನ್ನು ಆಯೋಜಿಸಲು ಸವಾಲಿನ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಅಯ್ಯಂಗೇರಿ ಭಾಗದ ಯುವಕರಿಗೆ ಕ್ರೀಡೆಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದೆಂದು ಪೊನ್ನಣ್ಣ ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಏನೇ ವೈಮಸ್ಸು ಇದ್ದರೂ  ಕ್ರೀಡೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತೇವೆ. ಕ್ರೀಡೆ ಮೂಲಕ‌ ಸ್ನೇಹ ಹಾಗೂ ಒಗ್ಗಟ್ಟು ವೃದ್ಧಿಸುತ್ತದೆ. ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಹೇಳಿದರು.

ಮೂರು‌‌ ದಿನಗಳ ಕಾಲ ನಡೆಯುವ ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಜನ್-07 ಕ್ರೀಡಾಕೂಟದಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿದೆ. 150 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆಯೋಜಕರು, ಅಯ್ಯಂಗೇರಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ಹಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಅಯ್ಯಂಗೇರಿ ಗ್ರಾ.ಪಂ  ಸದಸ್ಯ ಹಾಗೂ ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಾಶಿದ್, ಅಯ್ಯಂಗೇರಿ ಗ್ರಾ.ಪಂ ಸದಸ್ಯ  ಎಸ್. ಚಂಗಪ್ಪ, ಕಾವೇರಮ್ಮ,  ಗ್ರಾ.ಪಂ ಮಾಜಿ ಸದಸ್ಯ ಮನೋಜ್ ಕುಮಾರ್, ಯುವ ನಟ ಕಿರಣ್ ಸೋಮಣ್ಣ, ಸಮಾಜ ಸೇವಕ ಉದ್ದಿಮಂಡ ಪ್ರಥಿ, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಪರವಂಡ, ಚೆಟ್ಟಿಮಾನಿ ಗ್ರಾ.ಪಂ  ಉಪಾಧ್ಯಕ್ಷ ವಿಶು, ಸದಸ್ಯ ಹಾರಿಸ್ ಚೆಟ್ಟಿಮಾನಿ ಹಾಗೂ ಇನ್ನಿತರರು ಇದ್ದರು.