Advertisement
3:40 AM Saturday 2-December 2023

ನಾಪೋಕ್ಲು : ಗ್ರಾ.ಪಂ ಬಹಿರಂಗ ಹರಾಜಿನಲ್ಲಿ ಸ್ಥಳೀಯರಿಗೆ ಅವಕಾಶ ನೀಡಲು ಮನವಿ  

20/02/2023

ನಾಪೋಕ್ಲು ಫೆ.20 :   ಸ್ಥಳೀಯ ಗ್ರಾ.ಪಂ  ವಾರ್ಷಿಕ ಹರಾಜು ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಒಳಒಪ್ಪಂದ ಮಾಡಿಕೊಂಡು ಬೇನಾಮಿ ಹೆಸರಿನಲ್ಲಿ ಪಂಚಾಯಿತಿಯ ಕೆಲವು ಸದಸ್ಯರುಗಳು ಮೀನು ಮತ್ತು ಮಾಂಸ ಮಾರಾಟದ ಲೈಸೆನ್ಸ್ ಪಡೆದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಗ್ರಾ.ಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಆರ್‌ಟಿಐ ಕಾರ್ಯಕರ್ತ ಕೆ.ಎ.ಹಾರಿಸ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದ ಹಸಿಮೀನು ಮಾರಾಟ ಹಕ್ಕು ಎರಡು ಎಂದು ನಿಗದಿಪಡಿಸಿದ್ದು, ಈ ಹಕ್ಕನ್ನು ಇಬ್ಬರು ಗ್ರಾ.ಪಂ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು ಬೇನಾಮಿ ಹೆಸರಿನಲ್ಲಿ ಪಟ್ಟಣದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಕೋಳಿ, ಕುರಿ ಮಾಂಸ ವ್ಯಾಪಾರ ಕೂಡ ಪಟ್ಟಣದಲ್ಲೇ ಅಂಗಡಿಗಳನ್ನು ತೆರೆದು ಮಾರಾಟ ಮಾಡುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಇದರ ದುರ್ವಾಸನೆಯಿಂದ ಪಟ್ಟಣದಲ್ಲಿ ನಡೆದಾಡಲು ತೊಂದರೆ ಉಂಟಾಗುತ್ತಿದೆ ಎಂದರು.

ಕುರಿ ಕೋಳಿ,ಮಾಂಸ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಎಲ್ಲಾ ರೀತಿಯ ಮಳಿಗೆ ಸೌಲಭ್ಯ ಕಲ್ಪಿಸಿದ್ದರೂ ಕೆಲವು ಪಂಚಾಯಿತಿ ಸದಸ್ಯರು ವ್ಯಾಪಾರಿಗಳ ಜೊತೆ ಶಾಮಿಲಾಗಿ ಪಟ್ಟಣದಲ್ಲಿ ಮಾರಾಟ ಮಾಡಲು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಅನುವು ಮಾಡಿಕೊಟ್ಟಿದ್ದು, ಇದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.

ಇದರಲ್ಲಿ ಪಂಚಾಯತಿಯ ಕೆಲವು ಸದಸ್ಯರು ಸ್ವಂತ ಲಾಭಕ್ಕಾಗಿ ಪಂಚಾಯಿತಿಯ ನಿಯಮಗಳನ್ನೇ ಗಾಳಿಗೆ ತೂರಿ ಪಂಚಾಯಿತಿಗೆ ಸಿಗಬೇಕಾದ ಆದಾಯವನ್ನು ಇಲ್ಲದಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಕೂಡ ಸಾರ್ವಜನಿಕರ ಪರವಾಗಿ ಯಾವುದೇ ಕ್ರಮಕೈಗೊಳ್ಳದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಪೋಕ್ಲು ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ಬೆಲೆಗೆ ಮೀನು ಮಾಂಸ ಸಿಗುತ್ತಿದ್ದರೆ, ನಾಪೋಕ್ಲು ಪಟ್ಟಣದಲ್ಲಿ ಬೆಲೆ ಏರಿಕೆಯಿಂದ ಮಾಂಸ ಪ್ರಿಯರು ಸೇವಿಸದಂತ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಇಂತಿಷ್ಟೇ ಪರವನಾಗಿ ಎಂಬ ಕಾನೂನುಬಾಹಿರ ನಿಗದಿಪಡಿಸುವಿಕೆ ಯನ್ನು ರದ್ದು ಮಾಡಬೇಕು. ಹರಾಜು ಪ್ರಕ್ರಿಯೆಯಲ್ಲಿ ಗ್ರಾಮದ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸುವ ಮೂಲಕ ಪಂಚಾಯಿತಿಗೆ ಹೆಚ್ಚು ಆದಾಯ ತರಲು ಮುಂದಾಗುವುದರೊಂದಿಗೆ ಮೀನು, ಮಾಂಸ ವ್ಯಾಪಾರಿಗಳಿಗೆ ನಿಗದಿತ ದರಕ್ಕೆ ವ್ಯಾಪಾರ ವಹಿವಾಟು ಮಾಡಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಜಿ.ಪಂ  ಸಿಇಓ ಮತ್ತು ತಾಲೂಕು ಪಂಚಾಯಿತಿ ಇಓ ಗಳಿಗೆ ಮನವಿ ನೀಡಲಾಗಿದ್ದು ಇದಕ್ಕೆ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆಂದು ಹಾರಿಸ್ ತಿಳಿಸಿದರು.

ಈ ಸಂದರ್ಭ ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಅಶ್ರಫ್ ಫ್ರಿಝಿಕೋನ್, ವಿನೋದ್, ಲತೀಫ್, ನಝೀರ್,ಪ್ರಕಾಶ್, ಷರೀಫ್, ಮತ್ತಿತರರು ಹಾಜರಿದ್ದರು.

ವರದಿ : ಝಕರಿಯ ನಾಪೋಕ್ಲು