ಫೆ.28ರಂದು ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ

ಮಡಿಕೇರಿ ಫೆ.20 : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಫೆ.28ರಂದು ನಗರದ ಪೊಲೀಸ್ ‘ಮೈತ್ರಿ ಭವನ’ದಲ್ಲಿ ನಡೆಯಲಿದೆಯೆಂದು ಸಂಘದ ಉಪಾಧ್ಯಕ್ಷರಾದ ಬಿ.ಆರ್. ಲಿಂಗಪ್ಪ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಹಾಸಭೆ ಅಂದು ಬೆಳಗ್ಗೆ 10 ಗಂಟೆಗೆ ಸಂಘದ ಅಧ್ಯಕ್ಷ ಎ.ಕೆ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಬಿ.ಕೆ.ಶಿವರಾಮ್, ರಾಜ್ಯ ಕಾರ್ಯದರ್ಶಿ ಕುಮಾರ್ ಎಸ್. ಕರ್ನಿಂಗ್, ಮೈಸೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮರಿಸ್ವಾಮಿ, ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷರಾದ ಎಂ.ಎ.ಅಪ್ಪಯ್ಯ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.
ಸನ್ಮಾನ-ಪ್ರತಿಭಾ ಪುರಸ್ಕಾರ- ಮಹಾಸಭೆಯಲ್ಲಿ ಸಂಘದ ಹಿರಿಯ 10 ಮಂದಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಮತ್ತು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಇಬ್ಬರು ಮಕ್ಕಳ ಪ್ರತಿಭಾ ಪುರಸ್ಕಾರ ನಡೆಯಲಿದೆಯೆಂದು ಹೇಳಿದರು.
::: ಆರೋಗ್ಯ ಭಾಗ್ಯ :::
ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಲ್ಲಿ 925 ಸದಸ್ಯರುಗಳಿದ್ದಾರೆ. ಇವರುಗಳು ಯೋಗ್ಯ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ‘ಆರೋಗ್ಯ ಭಾಗ್ಯ’ ಯೋಜನೆಗೆ ಒಳಪಡುವುದು ಅವಶ್ಯ. ಈಗಾಗಲೆ ಸಾಕಷ್ಟು ಸದಸ್ಯರು ಆರೋಗ್ಯ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ. ಮತ್ತಷ್ಟು ಮಂದಿ ಇನ್ನೂ ಇದರ ವ್ಯಾಪ್ತಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸದಸ್ಯರು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಸಂಘದ ಮೂಲಕ ಆರೋಗ್ಯ ಸೇವೆಗೆ ಒಳಪಡುವಂತೆ ಮನವಿ ಮಾಡಿ, ಈ ಬಗ್ಗೆ ಸಂಘದ ಕಾರ್ಯದರ್ಶಿ ಅಚ್ಚುತನ್ ನಾಯರ್ ದೂ. 9972265296 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಸಾಕಷ್ಟು ನಿವೃತ್ತ ಪೊಲಿಸ್ ಅಧಿಕಾರಿಗಳು ಇನ್ನೂ ಸಂಘದ ಸದಸ್ಯತ್ವವನ್ನು ಪಡೆದುಕೊಂಡಿಲ್ಲ. ಮಹಾಸಭೆಯ ಸಂದರ್ಭ ಸದಸ್ಯತ್ವವನ್ನು ಹೊಂದಿಕೊಳ್ಳಬೇಕೆಂದು ಬಿ.ಆರ್.ಲಿಂಗಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಅಚ್ಚುತನ್ ನಾಯರ್, ಖಜಾಂಚಿ ಬಿ.ಎಂ.ಭೀಮಯ್ಯ, ನಿರ್ದೇಶಕರಾದ ಎಂ.ಕೆ.ಕಾವೇರಪ್ಪ ಹಾಗೂ ಸಿ.ಟಿ.ಚೀಯಣ್ಣ ಉಪಸ್ಥಿತರಿದ್ದರು.
