Advertisement
1:17 AM Thursday 7-December 2023

ಮೊಗೇರ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ : ಆರ್ಥಿಕವಾಗಿ ಸಬಲರಾಗಲು ಕರೆ

20/02/2023

ಮಡಿಕೇರಿ ಫೆ.20 : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜ ಹಾಗೂ ಮೊಗೇರ ಗ್ರಾಮ ವಿಕಾಸ ಯೋಜನೆಯ ಜಿಲ್ಲಾ ಕಚೇರಿಯನ್ನು ಸುಂಟಿಕೊಪ್ಪದಲ್ಲಿ ಉದ್ಘಾಟಿಸಲಾಯಿತು.
ದೇವಯ್ಯ ಕಾಂಪ್ಲೆಕ್ಸ್ ನಲ್ಲಿ ನೂತನ ಕಚೇರಿಯನ್ನು ಮೊಗೇರ ಸಂಘದ ಸ್ಥಾಪಕ ಸದಸ್ಯರಾದ ಅಕ್ಕಮ್ಮ ಮೂರ್ತಿ ಉದ್ಘಾಟಿಸಿದರು.
ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉಪ ತಹಶೀಲ್ದಾರ್ ತುಕ್ರಪ್ಪ ಹಾಗೂ ಮೊಗೇರ ಸೇವಾ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ತುಕ್ರಪ್ಪ ಅವರು, ಮೊಗೇರ ಸೇವಾ ಸಮಾಜವು ಗ್ರಾಮ ವಿಕಾಸ ಯೋಜನೆಯ ಮೂಲಕ ಸ್ವಸಹಾಯ ಸಂಘವನ್ನು ಆರಂಭಿಸಿ ಆರ್ಥಿಕವಾಗಿ ದುರ್ಬಲರಾದವರಿಗೆ ಹಣಕಾಸಿನ ಬಲ ತುಂಬುತ್ತಿರುವುದು ಶ್ಲಾಘನೀಯವೆಂದರು.
ಮೊಗೇರ ಸಮಾಜದ ಮಂದಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಸಮಾಜಕ್ಕೆ ಸೇರಿದ ನೌಕರ ಬಾಂಧವರು ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರವನ್ನು ನೀಡಬೇಕೆಂದು ಕರೆ ನೀಡಿದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಕೊಡಗಿನ ಮೊಗೇರ ಬಾಂಧವರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಮೊಗೇರ ಜನಸಂಖ್ಯೆ ಗುರುತಿಸಲು ಸಹಕರಿಸುವಂತೆ ಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಕಡು ಬಡತನದಲ್ಲಿರುವ ಮೊಗೇರ ಜನರ ಆರ್ಥಿಕ ಪುನಶ್ಚೇತನಕ್ಕಾಗಿ ಮೊಗೇರ ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ ಎಂದರು.
ಹಂತ ಹಂತವಾಗಿ ಜನಾಂಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 2 ರಿಂದ 4 ಮೊಗೇರ ಸೇವಾ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರ ಮೂಲಕ ಸಮುದಾಯದ ನಿಖರವಾದ ಜನಸಂಖ್ಯೆ, ಶೈಕ್ಷಣಿಕ ಪ್ರಗತಿ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲಾಗುವುದು. ಅಗತ್ಯಕ್ಕೆ ತಕ್ಕಂತೆ ದಾನಿಗಳು ಹಾಗೂ ಸಮಾಜದ ಮೂಲಕ ನೆರವು ನೀಡಲಾಗುವುದು. ಶೀಘ್ರ ಮೊಗೇರ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಲಾಗುವುದು ಎಂದರು.
::: ಮತಗಳಿಕೆಗೆ ಮಾತ್ರ ಸೀಮಿತ :::
ರಾಜಕಾರಣಿಗಳು ನಮ್ಮ ಸಮುದಾಯವನ್ನು ಕೇವಲ ಮತಗಳಿಕೆಗೆ ಮಾತ್ರ ಸೀಮಿತಗೊಳಿಸಿದ್ದು, ಯಾವುದೇ ಬೇಡೆಕೆಯನ್ನು ಈಡೇರಿಸುವ ಮನಸ್ಸು ಮಾಡುತ್ತಿಲ್ಲ. ಸಮಾಜದ ಸಮುದಾಯಭವನ ಮತ್ತು ಶೈಕ್ಷಣಿಕ ಸಂಸ್ಥೆ ಸ್ಥಾಪನೆಗಾಗಿ ಸ್ಥಳಾವಕಾಶ ಕೋರಿದರು ಯಾವುದೇ ರೀತಿಯ ಸ್ಪಂದನೆಯನ್ನು ಶಾಸಕರು ಹಾಗೂ ಜಿಲ್ಲಾಡಳಿತ ನೀಡಿಲ್ಲ. ಇತ್ತೀಚೆಗೆ ನಡೆದ ನಿವೇಶನ ರಹಿತರ ಹೋರಾಟಕ್ಕೂ ಕೂಡ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಆರೋಪಿಸಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಆದಷ್ಟು ಶೀಘ್ರ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ವಿವಿಧ ಸಂಘಟನೆಗಳ ಸಮಾನ ಮನಸ್ಕರ ಸಭೆ ಕರೆದು ಮತದಾನಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುವುದೆಂದು ಗೌತಮ್ ಶಿವಪ್ಪ ತಿಳಿಸಿದರು.
ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು ಹಾಗೂ ಮಾಜಿ ಅಧ್ಯಕ್ಷ ಪಿ.ಎಂ.ರವಿ ಮಾತನಾಡಿದರು.
ಕೊಡಗು ಗ್ರಾಮೀಣ ಬ್ಯಾಂಕ್ ಉದ್ಯೋಗಿ ಲೋಕಯ್ಯ, ಪ್ರಮುಖರಾದ ಸೋಮಯ್ಯ, ಮದೆನಾಡು ಗ್ರಾ.ಪಂ ಉಪಾಧ್ಯಕ್ಷೆ ಚಂದ್ರಾವತಿ, ನಾಕೂರು-ಶಿರಂಗಾಲ ಪಂಚಾಯತ್ ಸದಸ್ಯರಾದ ಪ್ರೇಮಕೃಷ್ಣಪ್ಪ, ಹರದೂರು ಗ್ರಾ.ಪಂ ಸದಸ್ಯರಾದ ಕುಸುಮ ಪೂವಪ್ಪ, ಸಂಘದ ಜಿಲ್ಲಾ ಉಪಾಧ್ಯಕ್ಷ ಕೃಷ್ಣ, ಮಡಿಕೇರಿ ತಾಲೂಕು ಅಧ್ಯಕ್ಷ ದಿನೇಶ್ ಉಡೋತ್, ಸೋಮವಾರಪೇಟೆ ಅಧ್ಯಕ್ಷ ದಿನೇಶ್ ಕೆಂಚಬಾಣೆ, ವಿರಾಜಪೇಟೆ ತಾಲೂಕು ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ದೇವಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಕುಶಾಲನಗರ ತಾಲ್ಲೂಕು ಅಧ್ಯಕ್ಷ ಗಣೇಶ್ ಪಿ.ಜಿ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸುರೇಶ್ ನಿರೂಪಿಸಿ, ವಂದಿಸಿದರು.