Advertisement
2:14 AM Thursday 7-December 2023

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶಿಕ್ಷಕರಿಗೆ ಸನ್ಮಾನ

20/02/2023

ಮಡಿಕೇರಿ ಫೆ.20 :  ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯಲ್ಲಿ 2022- 23 ನೇ ಸಾಲಿನಲ್ಲಿ ಶೇ.100 ಫಲಿತಾಂಶ ಬರಲು ಕಾರಣಕರ್ತರಾದ  ಶಾಲೆಯ ಶಿಕ್ಷಕರನ್ನು   ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವಾಸುದೇವ್,  ಸಮಾಜದಲ್ಲಿ  ಉತ್ತಮ ನಾಗರೀಕರಾಗುವುದನ್ನು  ಗುರಿಯನ್ನಾಗಿಸಿಕೊಳ್ಳಬೇಕು.  ನಾವು ಯಾವರೀತಿ ಸಮಾಜದಲ್ಲಿ ಇರುತ್ತೇವೆ. ಯಾವ ರೀತಿ ವ್ಯವಹರಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಮಾನಸಿಕ, ದೈಹಿಕ ಹಾಗೂ ವ್ಯಕ್ತಿತ್ವದಿಂದ ಉತ್ತಮ ಮಾನವನಾಗಿ ಬದುಕುವುದನ್ನು ಕಲಿಯಬೇಕು ಎಂದು ಹಿತನುಡಿದರು.

ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ  ಹೆಚ್.ಎಲ್.ದಿವಾಕರ್ ಮಾತನಾಡಿ, ದಲಿತ ಸಂಘರ್ಷ ಕಳೆದ ಒಂದು ದಶಕದಿಂದ ನಡೆಸಿದ ಸೇವೆ ಹಾಗೂ ವಿದ್ಯಾರ್ಥಿಗಳಿಗೆ, ಪೋಷಕರಿಗೆ ನೀಡಿದ ಸನ್ಮಾನದ ಉದ್ದೇಶವನ್ನು ವಿವರಿಸಿದರು.  ಸನ್ಮಾನದಿಂದ ಸ್ಪೂರ್ತಿ ಪಡೆಯುವ ವಿದ್ಯಾರ್ಥಿಗಳು ತಾವೂ ಹೆಚ್ಚಿನ ಸಾಧನೆ ತೋರಲು ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳು ದೇಶದ ಶಕ್ತಿ. ಅವರನ್ನು ಚಿಕ್ಕಂದಿನಿಂದಲೇ ಜಾಗೃತಗೊಳಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಂಸ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸನ್ಮಾನ ಮಾಡುವುದು ಶ್ಲಾಘನೀಯ. ಮಕ್ಕಳು ಪುಸ್ತಕವನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಇದು ಜ್ಞಾನಾರ್ಜನೆಗೆ ಬಹಳ ಮುಖ್ಯ, ಅಕ್ಷರದ ಅರಿವನ್ನು ಮೂಡಿಸುವುದು ಸಮಾಜದಲ್ಲಿ ಬದುಕಲು ನೆರವಾಗುತ್ತದೆ ಎಂದರು.

ಮುಖ್ಯ ಶಿಕ್ಷಕಿ ದೇವಮ್ಮ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತ ಅವಕಾಶಗಳನ್ನು ನಿರೀಕ್ಷಿಸಬೇಡಿ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ ಎನ್ನುವುದನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಅಂಬೇಡ್ಕರ್ ಅವರ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ, ಡಾ.ಬಿ ಆರ್ ಅಂಬೇಡ್ಕರ್ ಅವರು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಅರಿವಿತ್ತರು. ವಿದ್ಯಾರ್ಥಿಗಳು ಯಾವ ಕಾರಣಕ್ಕೆ ತಮ್ಮ ಪಠ್ಯಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನು ಓದಬೇಕು ಹಾಗು ಈ ಓದು ಯಾವಾಗ ಅವರಿಗೆ ನೆರವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ‌ ಕೊನೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿಯಾದ ರಶ್ಮಿ ಸ್ವಾಗತಿಸಿ ವಂದಿಸಿದರು.