Advertisement
3:40 AM Friday 8-December 2023

ಮಡಿಕೇರಿ : ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ನೇರವಾಗಿ ಭೇಟಿ ಮಾಡಲು ಅವಕಾಶ : ಅರ್ಜಿ ವಿಲೇವಾರಿ ಪ್ರಕ್ರಿಯೆ ಪಾರದರ್ಶಕ

20/02/2023

ಮಡಿಕೇರಿ ಫೆ.20 : ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುವ ಎಲ್ಲಾ ಅರ್ಜಿಗಳು ಗಣಕೀಕೃತ ವ್ಯವಸ್ಥೆಯಡಿ ನಿರ್ವಹಣೆ ಮಾಡಲು ಎನ್‍ಐಸಿ ಯವರ ಸಹಯೋಗದೊಂದಿಗೆ ಪರಿವಾಹನ್ ವೆಬ್‍ಸೈಟ್ ಸೃಜಿಸಲಾಗಿದೆ. ಈ ವೆಬ್‍ಸೈಟ್ ಉಪಯೋಗಿಸಿಕೊಂಡು ಸಾರ್ವಜನಿಕರು ಕಚೇರಿಗೆ ಭೇಟಿ ನೀಡದೇ ಅರ್ಜಿ ಸಲ್ಲಿಸಿ, ಶುಲ್ಕ ಹಾಗೂ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಹೆಚ್ಚಾಗಿ ಪಡೆಯಬೇಕೆಂದು ತಿಳಿಯಪಡಿಸಿದೆ.
ಶುಲ್ಕ ಪಾವತಿಯ ನಂತರ ಪರಿವಾಹನ್ ವೆಬ್‍ಸೈಟ್ (Parivahan Website)  ನಲ್ಲಿ ಅರ್ಜಿ ಸಲ್ಲಿಸಿ ಸ್ಪೀಡ್ ಪೋಸ್ಟ್ ಮುಖಾಂತರ ದಾಖಲೆಗಳೊಂದಿಗೆ RTO ಕಚೇರಿಗೆ ಕಳುಹಿಸಿಕೊಡಲು ತಿಳಿಯಪಡಿಸಿದೆ. ಸಿದ್ದ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರವೇ ಮಾಲೀಕರ ಮನೆಯ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು.
ವಾಹನ್ ಮತ್ತು ಸಾರಥಿ ಅಡಿಯಲ್ಲಿ  ಪ್ರತಿಯೊಂದು ವ್ಯವಹಾರವನ್ನು ಪಾರದರ್ಶಕ ಮಾಡಲಾಗಿದ್ದು, ಕಚೇರಿಯಲ್ಲಿ ಪ್ರತಿ ಹಂತದಲ್ಲಿ ಪ್ರತಿ ಅರ್ಜಿಗೆ ಸಂಬಂಧಿಸಿದಂತೆ ವ್ಯವಹರಿಸುವ ಕಾರ್ಯಗಳು ಅರ್ಜಿದಾರರಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತಿರುತ್ತದೆ.
ಸಾರಿಗೇತರ ಹೊಸ ನೋಂದಣಿ ವಾಹನಗಳಿಗೆ ಸಂಬಂಧಿಸಿದಂತೆ ಶೇ.100 ರಷ್ಟು ಸಂಪರ್ಕ ರಹಿತ ಸೇವೆಗೆ ಇಲಾಖೆಯು ಅವಕಾಶ ಮಾಡಿಕೊಟ್ಟಿದ್ದು, ಅಧಿಕೃತ ಡೀಲರ್ ಹಂತದಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ, ತೆರಿಗೆ, ಶುಲ್ಕ ಪಾವತಿ, ಹೊಸ ನೋಂದಣಿ ಸಂಖ್ಯೆ ಸೃಜನೆ ಆಗುತ್ತದೆ. ಸಾರಿಗೆ ವಾಹನಗಳಿಗೆ ಸಂಬಂದಿಸಿದಂತೆ, ವಾಹನಗಳು ಕಚೇರಿಯಲ್ಲಿ  ಪರಿಶೀಲನೆಗೆ ಒಳಪಡುವುದು ಮತ್ತು ಅವಶ್ಯಕ ಎಲ್ಲಾ ದಾಖಲೆಗಳನ್ನು ಡೀಲರ್‍ಗಳು, ಸ್ಪೀಡ್ ಗವರ್ನರ್, ಜಿಪಿಎಸ್, ಬಾಡಿ ಬಿಲ್ಡರ್ ಸರ್ಟಿಫಿಕೇಟ್, ವೆಜಿಮೆಂಟ್ ಸ್ಲಿಪ್ (Weighment Slip) ಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಅಪ್‍ಲೋಡ್ ಮಾಡಬೇಕಾಗಿರುತ್ತದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಆನ್‍ಲೈನ್ ಅನುಮೋದನೆಯ ಬಳಿಕ ಡೀಲರ್‍ರಿಂದ ವಾಹನವನ್ನು ನೇರವಾಗಿ ಡೆಲಿವರಿ ಪಡೆಯಬಹುದಾಗಿರುತ್ತದೆ. ಡೆಲಿವರಿ ಪಡೆಯುವ ಮುನ್ನ ವಾಹನ ಮಾಲೀಕರು ಅಧಿಕೃತ ಡೀಲರ್ ರವರು ಅವರ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿವಾಹನ್ (Parivahan)   ಅಡಿಯಲ್ಲಿ ಸರಿಯಾಗಿ ಅಪ್‍ಲೋಡ್ ಮಾಡಿರುವ ಬಗ್ಗೆ ಧೃಢೀಕರಿಸಿಕೊಂಡು ಬಳಿಕ ಡೆಲಿವರಿ ಪಡೆಯಬೇಕಾಗಿರುತ್ತದೆ.
ಅರ್ಜಿ ಸಲ್ಲಿಕೆ ಅಥವಾ ಇತರೇ ಅವಶ್ಯಕ ಮಾಹಿತಿಗೆ ಕಚೇರಿಯ ಅಧೀಕ್ಷಕರು ಮತ್ತು ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಯವರನ್ನು 08272-225785 ರಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಯವರನ್ನು ಕಚೇರಿ ವೇಳೆಯಲ್ಲಿ ನೇರವಾಗಿ ಮುಕ್ತವಾಗಿ ಭೇಟಿ ಮಾಡಬಹುದಾಗಿದ್ದು, ದೂರವಾಣಿ ಸಂಖ್ಯೆ: 9449864012 ನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ಅವರು ತಿಳಿಸಿದ್ದಾರೆ.