ಕಾವಾಡಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ : ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ಸುಜಾ ಕುಶಾಲಪ್ಪ ಸಲಹೆ

ವಿರಾಜಪೇಟೆ ಫೆ.21 : ಸರ್ಕಾರ ಕೊಡಗು ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿದೆ. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತಾಗಬೇಕು. ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಇದೀಗ ಚೇತರಿಸಿಕೊಳ್ಳುತ್ತಿದೆ. ಪ್ರಮುಖ ಆರ್ಥಿಕ ವಹಿವಾಟುಗಳು ನಡೆಯುತ್ತಿದ್ದು ದೇಶ, ರಾಜ್ಯ ಮುಂಚೂಣಿಯತ್ತ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು.
ವಿಶೇಷ ಅನುದಾನದ ರೂ. 1 ಕೋಟಿ ಪ್ಯಾಕೇಜ್‍ನಡಿಯಲ್ಲಿ ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯ ಕಾವಾಡಿಯಲ್ಲಿನ ಕುಟ್ಟಂಡ ಐನ್ ಮನೆ(ಬಲ್ತೇರಿ) ಗೆ ತೆರಳುವ ರಸ್ತೆಗೆ 23 ಲಕ್ಷ ವೆಚ್ಚದ ನೂತನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಲವೆ ದಿನಗಳಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳಿಯರು ಸಹಕಾರ ನೀಡಬೇಕು, ಪ್ರತಿಯೊಬ್ಬರಿಗು ಬದುಕಲು ಮನೆ ಅವಶ್ಯವಿದೆ, ಹಾಗೆ ವಿದ್ಯುತ್, ಕುಡಿಯುವ ನೀರು ಮೂಲಭೂತ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಿ ಕೊಡುವುದಾಗಿ ತಿಳಿಸಿದರಲ್ಲದೆ 75 ವರ್ಷದಲ್ಲಿ 60 ವರ್ಷ ಕಾಂಗ್ರೇಸ್ ಆಳಿದೆ. ಆದರೆ ಈಗ ಗ್ರಾಮೀಣ ಪ್ರದೇಶಗಳು ಅಭಿವೃದ್ದಿ ಹೊಂದಿದೆ. ಮೋದಿ ಆಡಳಿತ ಸುಭದ್ರ ಆಡಳಿತವಾಗಿರುವುದರಿಂದ ದೇಶ ವಿಧೇಶಗಳಲ್ಲಿ ಜನಮನ್ನಣೆ ಗಳಿಸಲು ಸಾಧ್ಯವಾಗಿದೆ. ಹಾಗೆಯೇ ರಾಜ್ಯ ಸರಕಾರ ಕೊಡಗಿನ ಅಭಿವೃದ್ದಿ ದೃಷ್ಟಿಯಿಂದ ಬಹಳಷ್ಟು ಅನುದಾನಗಳನ್ನು ಒದಗಿಸಿಕೊಟ್ಟು ಸಹಕರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದರು.
ಬಿಜೆಪಿ ಪ್ರಮುಖರಾದ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ ಗ್ರಾಮಗಳಲ್ಲಿ ಅತಿ ಹೆಚ್ಚು ಮಳೆ ಬೀಳುವ ಕಾರಣ ಇಲ್ಲಿನ ಗ್ರಾಮೀಣ ಭಾಗದ ರಸ್ತೆಗಳಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಸುಜಾ ಕುಶಾಲಪ್ಪ ಅವರು ತಮ್ಮ ಜನಪರ ಕಾಳಜಿಯಿಂದ ವಿಶೇಷ ಮುತುವರ್ಜಿ ವಹಿಸಿ ಸರಕಾರದಿಂದ ಕೊಡಗಿಗೆ ವಿಶೇಷ ಅನುದಾನ ತಂದು ಗ್ರಾಮದ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಶ್ರಮ ವಹಿಸಿದ್ದಾರೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಪ್ರಾರಂಭಗೊಂಡು ಸಾರ್ವಜನಿಕ ಬಳಕೆಗೆ ಅವಕಾಶವಾಗಲಿದೆ. ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಸರ್ಕಾರ ಒದಗಿಸಲಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಸಹ ಸಹಕರಿಸಬೇಕು ಎಂದು ಹೇಳಿದರು.
ಗುದ್ದಲಿ ಪೂಜೆ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಬಿ. ನಾಣಯ್ಯ, ಹಾಗೂ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು, ಕಾವಾಡಿಚಂಡ ಗಣಪತಿ, ಕುಟ್ಟಂಡ ಕುಟುಂಬದ ಪಟ್ಟೆದಾರರು, ಕುಟುಂಬಸ್ಥರು, ಗುತ್ತಿಗೆದಾರರಾದ ಧನು, ಹಾಗೂ ವಿನು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
