Advertisement
2:37 AM Thursday 7-December 2023

ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ : ಕರ್ನಾಟಕ ತಂಡದ ಸಾಧನೆ

21/02/2023

ವಿರಾಜಪೇಟೆ ಫೆ.21 : ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ಅವರ ನೇತೃತ್ವದ ಕರ್ನಾಟಕ ಕರಾಟೆ ತಂಡ ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು 4 ಪ್ರಶಸ್ತಿಗಳನ್ನು ಪಡೆದು ಸಾಧನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಕರಾಟೆ ತಂಡ ಮುಂಬರುವ ಜೂನ್ ತಿಂಗಳಿನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾರತ ಕರಾಟೆ ತಂಡವನ್ನು ಪ್ರತಿನಿಧಿಸಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದೆ.
ಫೆ.16 ರಿಂದ 19 ರವರೆಗೆ ಡೆಹ್ರಾಡೂನ್‍ನಲ್ಲಿ ನಡೆದ ಕರಾಟೆ ಇಂಡಿಯಾ ಆರ್ಗನೈಸೇಶನ್ ಅಖಿಲ ಭಾರತ ಹಿರಿಯರ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2023ನಲ್ಲಿ ಅರುಣ್ ಮಾಚಯ್ಯ ನೇತೃತ್ವದಲ್ಲಿ ಒಟ್ಟು 27 ಕರಾಟೆಪಟುಗಳ ಕರ್ನಾಟಕದ ತಂಡ ಪಾಲ್ಗೊಂಡಿತ್ತು. ಈ ಪೈಕಿ 21 ವರ್ಷದೊಳಗಿನ ಕಟ್ಟಾ ವಿಭಾಗದಲ್ಲಿ ಕರ್ನಾಟಕದ ಜಾಗೃತ್ ಗೌಡ, ವಿಘ್ನೇಶ್, ದಿಲೀಪ್ ಮತ್ತು ಅತೀಶ್ ಅವರನ್ನೊಳಗೊಂಡ ತಂಡ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ ಕರ್ನಾಟಕ ತಂಡದ ಹೆಸರಾಂತ ಕರಾಟೆ ಪಟು ಜಾಗೃತ್ ಗೌಡ ವೈಯಕ್ತಿಕ ವಿಭಾಗದಲ್ಲೂ ಚಿನ್ನದ ಪದಕ ಪಡೆದು ದಾಖಲೆ ನಿರ್ಮಿಸಿದ್ದಾರೆ.
ರಾಜ್ಯ ತಂಡದ ಜಿ. ಶಶಾಂಕ್ ಅವರು ಕುಮಿಟಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ಚೈತ್ರ ಶ್ರೀ ಅವರು ಕಟ್ಟಾ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಎಸ್.ಡಿ. ಪ್ರಸಾದ್ ಪ್ರಧಾನ ತರಬೇತುಗಾರರಾಗಿ, ವಿದ್ಯಾಸಾಗರ್ ಮತ್ತು ಆನಂದ್ ಗೌಡರ್ ಅವರು ಈ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ರಾಜ್ಯ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಕಾಮನ್ ವೆಲ್ತ್ ಕರಾಟೆ ಫೆಡರೇಷನ್‍ನ ಉಪಾಧ್ಯಕ್ಷರು ಮತ್ತು ವಿಶ್ವ ಕರಾಟೆ ಫೆಡರೇಷನ್‍ನ ಕಾರ್ಯಕಾರಿ ಸಮಿತಿ ಸದಸ್ಯರಾದ ಭರತ್ ಶರ್ಮಾ ಮತ್ತು ಕರಾಟೆ ಇಂಡಿಯಾ ಆರ್ಗನೈಸೇಷನ್ ಕಾರ್ಯದರ್ಶಿಗಳಾದ ಸಂಜೀವ್ ಕುಮಾರ್ ಜಂಗ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಶಿಯೇಷನ್ ಕಾರ್ಯದರ್ಶಿ ಬಾರ್ಗವ ರೆಡ್ಡಿ ರಾಜ್ಯ ತಂಡದ ಕರಾಟೆಪಟುಗಳ ಉಸ್ತುವಾರಿಯನ್ನು ವಹಿಸಿಗೊಂಡಿದ್ದರು. ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಸ್ಥೆಯ ಕೊಡಗಿನ ಸೋಮಣ್ಣ ಸೇರಿದಂತೆ ಕೆ.ಪಿ. ಜೋಸ್ ಶಿವದಾಸ್, ಶಂಕರ್, ಭಾರತಿ, ಜಾನ್ಸನ್, ಕಾರ್ನಿಕ್, ಭರತ್, ಅಭಿಷೇಕ್ ಮತ್ತು ಅಭಿಲಾಶ್ ಈ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ರಾಜ್ಯ ತಂಡದ ಸಾಧನೆ ಕುರಿತು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿರುವ ಅರುಣ್ ಮಾಚಯ್ಯ, ಕರ್ನಾಟಕ ಕರಾಟೆ ತಂಡ ಇಂದು ದೇಶದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಏಷ್ಯನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ರಾಜ್ಯ ತಂಡಗಳು ಅರ್ಹತೆ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಕರ್ನಾಟಕ ಕರಾಟೆ ತಂಡದ ಎಲ್ಲ ಸಾಧನೆಗಳು ಮುಂಬರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದುಕೊಳ್ಳಲು ದಿಕ್ಸೂಚಿಯಾಗಲಿದೆ. ಮುಂದೆ ಕರ್ನಾಟಕ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.