Advertisement
4:17 AM Friday 8-December 2023

ವಿ. ಬಾಡಗ : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮೈದಾನ ಸಿದ್ಧ

21/02/2023

ವಿರಾಜಪೇಟೆ ಫೆ.21 : ಬಿಟ್ಟಂಗಾಲ ಸಮೀಪದ ವಿ.ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ವಿರಾಜಪೇಟೆ ತಾಲೂಕಿನ 3 ನಾಡುಗಳ ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯು ಫೆ.22 ರಿಂದ ಆರಂಭಗೊಳ್ಳಲಿದೆ. ವಿ. ಬಾಡಗದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯಲಿರುವ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದೆ.
ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ.ಬಾಡಗ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಇದಕ್ಕಾಗಿ ಗ್ರಾಮದ ಯುವಕರು ಪಂದ್ಯಾವಳಿಯ ಯಶಸ್ವಿಗಾಗಿ ಉತ್ಸಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ 17 ಕೊಡವ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ.
ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜನೆಗೊಂಡಿದೆ. ಈ ಪಂದ್ಯಾವಳಿಯ ನೆಪದಲ್ಲಿ ತೀರಾ ದುಸ್ಥಿತಿಯಲ್ಲಿದ್ದ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮೈದಾನವನ್ನು ಲಕ್ಷಾಂತರ ಮೊತ್ತದ ಹಣ ವಿನಿಯೋಗಿಸಿ ಅಭಿವೃದ್ಧಿಪಡಿಸಲಾಗಿದೆ. ಕ್ರೀಡಾ ಸಮಿತಿಯ ಅಧ್ಯಕ್ಷರಾಗಿರುವ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ಮೈದಾನವನ್ನು ಹಾಕಿ ಪಂದ್ಯಾವಳಿಗಾಗಿ ಸಜ್ಜುಗೊಳಿಸಲಾಗಿದೆ. ಅಭಿವೃದ್ಧಿಪಡಿಸಲಾದ ಹಾಕಿ ಮೈದಾನದ ಗುಣಮಟ್ಟವನ್ನು ನಿರ್ವಹಣೆ ಮಾಡಲು ಹೈಪ್ಲೈಯರ್ಸ್ ಸಂಸ್ಥೆ ಮುಂದೆಯೂ ಬದ್ಧವಾಗಿದೆ ಎಂದು ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಅವರು ಮಾಹಿತಿ ನೀಡಿದರು.
ಫೆ.22 ರಂದು ಬೆಳಿಗ್ಗೆ ಜರುಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ನಂಬುಡುಮಾಡ ಕಿಸಾ ತಮ್ಮಯ್ಯ, ವಕೀಲರಾದ ಕೊಕ್ಕಂಡ ಅಪ್ಪಣ್ಣ, ಗ್ರಾಮದ ಹಿರಿಯ ಮುಖಂಡರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ಹಾಕಿ ಕೂರ್ಗ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಲ್ಯಾಟಂಡ ಪಾರ್ಥ ಚಿಣ್ಣಪ್ಪ, ವಿ.ಬಾಡಗ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಎ. ರಾಜಮ್ಮ ಮತ್ತು ಇದೇ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಳವಂಡ ಸೀತಮ್ಮ ಪೂಣಚ್ಚ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಮಳವಂಡ ಸೀತಮ್ಮ ಪೂಣಚ್ಚ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಲು ಈಗಾಗಲೇ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಪಂದ್ಯಾವಳಿಯ ವಿನ್ನರ್ಸ್, ರನ್ನರ್ಸ್ ಮತ್ತು ತೃತೀಯ ಸ್ಥಾನ ವಿಜೇತ ತಂಡಗಳಿಗೆ ನಗದು ಬಹುಮಾನದೊಂದಿಗೆ ಶುದ್ಧ ಬೆಳ್ಳಿಯ ಟ್ರೋಫಿಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ದಿಲನ್ ಬೋಪಣ್ಣ ಮಾಹಿತಿ ನೀಡಿದರು.
ಅಭಿಪ್ರಾಯ :: (ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜನೆಗೊಂಡಿದೆ. ಪಂದ್ಯಾವಳಿಯ ನೆಪದಲ್ಲಿ ತೀರಾ ದುಸ್ಥಿತಿಯಲ್ಲಿದ್ದ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮೈದಾನವನ್ನು ಲಕ್ಷಾಂತರ ಮೊತ್ತದ ಹಣ ವಿನಿಯೋಗಿಸಿ ಅಭಿವೃದ್ಧಿಪಡಿಸಲಾಗಿದೆ. ಅಭಿವೃದ್ಧಿಪಡಿಸಲಾದ ಹಾಕಿ ಮೈದಾನದ ಗುಣಮಟ್ಟವನ್ನು ನಿರ್ವಹಣೆ ಮಾಡಲು ಹೈಪ್ಲೈಯರ್ಸ್ ಸಂಸ್ಥೆ ಮುಂದೆಯೂ ಬದ್ಧವಾಗಿದೆ.-ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ)