Advertisement
11:38 AM Monday 4-December 2023

ಫೆ.24 ರಿಂದ ಮಾ.3ರವರೆಗೆ ಎಮ್ಮೆಮಾಡು ಮಖಾಂ ಉರೂಸ್

22/02/2023

ಮಡಿಕೇರಿ ಫೆ.22 : ಮಡಿಕೇರಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಫೆ.24 ರಿಂದ ಮಾ.3ರವರೆಗೆ ನಡೆಯಲಿದೆಯೆಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಪಿ.ಎ.ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮತ್ತು ಇತರ ಮಹಾನುಭಾವರ ಹೆಸರಿನಲ್ಲಿ ಎಮ್ಮೆಮಾಡಿನಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಉರೂಸ್ ಜಾತಿ ಮತ ಧರ್ಮಗಳನನ್ನು ಮೀರಿ ಜಿಲ್ಲೆ, ರಾಜ್ಯ, ಹೊರ ರಾಜ್ಯದ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಈ ಬಾರಿಯ ಉರೂಸ್‍ನಲ್ಲಿ ನಾಡಿನ ವಿವಿಧೆಡೆಗಳಿಂದ 55 ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಹೇಳಿದರು.
ಫೆ.24 ರಂದು ಎಮ್ಮೆಮಾಡು ಜಮಾಅತ್ ಅಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸಲಿದ್ದು, ಉರೂಸ್‍ನ್ನು ಕೋಝಿಕೋಡ್ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗಿನ ನಾಯಿಬ್ ಖಾಝಿ ಶಾದುಲಿ ಫೈಝಿ ವಹಿಸಲಿದ್ದಾರೆ. ಸಂಜೆ 8 ಗಂಟೆಗೆ ಶಾಫಿ ಸಖಾಫಿ ಮುಂಡಂಬ್ರ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಫೆ.25 ರಂದು ಸಯ್ಯದ್ ಅಬ್ದುಲ್ ರಹ್ನಾನ್ ಇಂಜಿಚ್ಚಿಕೋಯ ಅಲ್ ಬುಖಾರಿ ನೇತೃತ್ವದಲ್ಲಿ ದ್ಸಿಕ್‍ರ್ ಹಲ್ಖಾ ಮತ್ತು ಮತ ಪ್ರವಚನ ನಡೆಯಲಿದೆ.ಫೆ.26 ರಂದು ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ನೇತೃತ್ವದಲ್ಲಿ ಖತಂ ದುಆ ಮಜ್ಲಿಸ್ ನಡೆಯಲಿದೆ.
ಸೌಹಾರ್ದ ಸಮ್ಮೇಳನ- ಉರೂಸ್‍ನ ನಾಲ್ಕನೇ ದಿನವಾದ ಫೆ.27 ರಂದು ಎಮ್ಮೆಮಾಡು ಜಮಾಅತ್ ಅಧ್ಯಕ್ಷರಾದ ಪಿ.ಎ. ಅಬೂಬಕ್ಕರ್ ಸಖಾಫಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಸೌಹಾರ್ದ ಸಮ್ಮೇಳನ ನಡೆಯಲಿದೆ. ಕಾಸರಗೋಡಿನ ಜಾಮಿಯ ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಮೌಲಾನಾ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ , ಮೌಲಾನಾ ಶಾಫಿ ಸಅದಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಜಿ. ಬೋಪಯ್ಯ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್. ಪೊನ್ನಣ್ಣ , ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷರಾದ ಯಾಕೂಬ್ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾgಂದರು. ಸಂಜೆ 4 ರಿಂದ 6ರ ವರೆಗೆ ಅನ್ನದಾನ ನಡೆಯಲಿದೆ. ರಾತ್ರಿ ಬಶೀರ್ ಫೈಝಿ ದೇಶಮಂಗಲಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಫೆ.28ರ ರಾತ್ರಿ ಆಶಿಕ್ ದಾರಿಮಿ ಆಲಪ್ಪುಝರಿಂದ ಮತಪ್ರವಚನ ನಡೆಯಲಿದೆಯೆಂದರು.
ಮಾ.1ರಂದು ಹಾಫಿಲ್ ಜುನೈದ್ ಜೌಹರಿ ಕೊಲ್ಲಂರಿಂದ ಹಾಗೂ ಮಾ.2ರಂದು ರಾತ್ರಿ 8 ಗಂಟೆಗೆ ಅಬ್ದುಲ್ ಸಲಾಂ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಚೆಯ್ಯೂರ್ ಮತಪ್ರವಚನದ ನೇತೃತ್ವ ವಹಿಸಲಿದ್ದಾರೆ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ ಪ್ರವಚನ ನೀಡಲಿದ್ದಾರೆ.
ಮಾ.3 ರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಯಿಬ್ ಖಾಝಿ ಕೊಡಗು ಅಬ್ದುಲ್ಲಾ ಫೈಜಿ ಎಡಪಾಲ ವಹಿಸಲಿದ್ದಾರೆ. ಬದ್ರು ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾಕ್ಟರ್ ಅಬ್ದುಲ್ ಹಕೀಂ ಅಝರಿ ಕಾಂತಪುರಂ ಮುಖ್ಯ ಭಾಷಣ ಮಾಡಲಿದ್ದಾರೆಂದು ಮಾಹಿತಿಯನ್ನಿತ್ತರು.
ಸುದ್ದಿಗೋಷ್ಠಿಯಲ್ಲಿ ಎಮ್ಮೆಮಾಡು ತಾಜಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಅಲಿ ನೆರೂಟ್ ಹಾಗೂ ಸಮಿತಿ ಸದಸ್ಯರಾದ ಉಸ್ಮಾನ್ ಮಾಂದಾಲ್ ಉಪಸ್ಥಿತರಿದ್ದರು.