ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ : ಮಾ.26 ರಂದು ಯುಗಾದಿ ಕವಿಗೋಷ್ಠಿ

ಮಡಿಕೇರಿ ಫೆ.22 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕವಿಗೋಷ್ಠಿ ಸಮಿತಿ ಸಹಯೋಗದಲ್ಲಿ ಮಾ.26 ರಂದು ಯುಗಾದಿ ಕವಿಗೋಷ್ಠಿ ಆಯೋಜಿಸಲಾಗಿದೆ.
ಮಾ.26 ರಂದು ತಿತಿಮತಿ ಜಂಗಲ್ ಹಾಡಿಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಬೆಳ್ಳಿ ಮಹೋತ್ಸವ ನೆನಪಿನ ಅಂಗವಾಗಿ ಕವಿತೆ ವಾಚಿಸುವ ಕವಿಗಳ ಕವನಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಕೊಡಗು ಬೆಳ್ಳಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಯುಕ್ತ ಕೊಡಗು ಜಿಲ್ಲೆಯ ಕವಿಗಳಿಂದ ಕನ್ನಡ ಕವನಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಕವಿಗಳು ಫೆ. 28ರ ಒಳಗೆ ಎಲ್ಲಿಯೂ ಪ್ರಕಟವಾಗದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಮ್ಮ ಸ್ವರಚಿತ ಕವನಗಳನ್ನು ನುಡಿ ಅಥವಾ ಬರಹದಲ್ಲಿ ಟೈಪಿಸಿ ಸಂಚಾಲಕರು, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಯುಗಾದಿ ಕವಿಗೋಷ್ಠಿ ಸಮಿತಿ, ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಗೋಣಿಕೊಪ್ಪ-571213 ಈ ವಿಳಾಸಕ್ಕೆ ಅಥವಾ 9980000845 ಈ ಮೊಬೈಲ್ ಸಂಖ್ಯೆಯ ವಾಟ್ಸಾಪ್‍ಗೆ ಕವನಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ. ಕವಿಗೋಷ್ಠಿ ಸಮಿತಿ ಸಂಚಾಲಕರಾಗಿ ಕೆ.ಬಿ. ಜಗದೀಶ್ ಜೋಡುಬೀಟಿ ಕಾರ್ಯನಿರ್ವಹಿಸಲಿದ್ದಾರೆ.
