ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ : ಅರ್ಹರಿಗೆ ತಲುಪಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚನೆ

ಮಡಿಕೇರಿ ಫೆ.22 : ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮ ಸಂಬಂದಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಜಿಲ್ಲಾ ಪಂಚಾಯಿತಿ, ಕೈಗಾರಿಕೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ ಮತ್ತಿತರ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸಿ, ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ವಿಳಂಭ ಅನುಸರಿಸಬಾರದು ಎಂದು ಸೂಚಿಸಿದರು.
ಶೈಕ್ಷಣಿಕ ಸೌಲಭ್ಯಗಳು, ಮೂಲ ಸೌಕರ್ಯಕ್ಕೆ ಒತ್ತು ನೀಡುವುದು, ವಿದ್ಯಾರ್ಥಿ ವೇತನ, ಸ್ವ ಉದ್ಯೋಗಕ್ಕೆ ಒತ್ತು, ಸಾಲ ಸೌಲಭ್ಯ, ವಸತಿ ಯೋಜನೆ, ಮತ್ತಿತರ ಕಾರ್ಯಕ್ರಮಗಳನ್ನು ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ ಅವರು ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮಗಳ ಉದ್ದೇಶ ಮತ್ತು ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ, ಖಾದಿ ಗ್ರಾಮೋದ್ಯೋಗ ಮತ್ತು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು, ಪೌರಾಯುಕ್ತರಾದ ವಿಜಯ, ರಾಜ್ಯ ಹಣಕಾಸು ಸಂಸ್ಥೆಯ ನಾಗೇಶ್, ವಕ್ಫ್ ಅಧಿಕಾರಿ ಇರ್ಪಾನ್, ಮೀನುಗಾರಿಕೆ ಇಲಾಖೆ ಅಧಿಕಾರಿ, ಇತರರು ತಮ್ಮ ಇಲಾಖೆಯಲ್ಲಿ ಆಗಿರುವ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಸಭೆ: 2015 ರಿಂದ 2020 ರವರೆಗೆ ಪ್ರವಾಸೋದ್ಯಮ ನೀತಿಯಡಿ ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ ನೀಡುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ನೀತಿಯಡಿ 5 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿವಿಧ ಹಂತದಲ್ಲಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಳ್ಳಾಲ್ ಅವರು ಮಾಹಿತಿ ನೀಡಿದರು.
ಕೆಲವು ರೆಸಾರ್ಟ್‍ಗಳು ಪೂರ್ಣಗೊಂಡ ಕಾಮಗಾರಿ ಸಂಬಂಧ ಪ್ರಮಾಣ ಪತ್ರಕ್ಕೆ ಮನವಿ ಮಾಡಿದ್ದಾರೆ. ಅದೇ ರೀತಿ ಕೆಲವು ರೆಸಾರ್ಟ್‍ನವರು ಕಾಲಾವಕಾಶ ನೀಡುವಂತೆ ಕೋರಿದ್ದಾರೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಾಲಾವಕಾಶ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ನೀಡುವಂತೆ ಸಲಹೆ ಮಾಡಿದರು. ಹಾಗೆಯೇ ಈಗಾಗಲೇ ರೆಸಾರ್ಟ್ ಕಾಮಗಾರಿ ಪೂರ್ಣಗೊಂಡಿರುವ ಸಂಬಂಧ ಸ್ಥಳ ಪರಿಶೀಲಿಸಿ ಷರತ್ತು ಬದ್ಧ ಅನುಮತಿ ನೀಡಬಹುದಾಗಿದೆ ಎಂದರು.
ಯಾವುದೇ ರೆಸಾರ್ಟ್ ನಿರ್ಮಾಣಕ್ಕೆ ಜಾಗದ ಭೂ ಪರಿವರ್ತನೆ ಆಗಿರಬೇಕು. ಸಾರ್ವಜನಿಕರ ಸುರಕ್ಷತೆಗೆ ಒತ್ತು ನೀಡಬೇಕು. ಸುಗಮ ಸಾರಿಗೆ ಸಂಪರ್ಕ ರಸ್ತೆ ಇರಬೇಕು. ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಹೀಗೆ ಹಲವು ಷರತ್ತುಗಳಿಗೆ ಅನ್ವಯಿಸಿ ಅನುಮತಿ ನೀಡಬಹುದಾಗಿದೆ ಎಂದು ಡಾ.ಬಿ.ಸಿ.ಸತೀಶ ಅವರು ಹೇಳಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಪ್ರವಾಸೋದ್ಯಮ ನೀತಿಯಡಿ ಅನುಮೋದನೆ ನೀಡುವ ಸಂಬಂಧ ಹಲವು ಸಲಹೆ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶಿವಕುಮಾರ್, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು, ಪೌರಾಯುಕ್ತರಾದ ವಿಜಯ, ರಾಜ್ಯ ಹಣಕಾಸು ಸಂಸ್ಥೆಯ ನಾಗೇಶ್, ಸೆಸ್ಕ್ ಎಇಇ ಸಂಪತ್, ನಗರ ಗ್ರಾಮಾಂತರ ಯೋಜನಾ ಇಲಾಖೆಯ ಸೌಮ್ಯ, ಇತರರು ತಮ್ಮ ವ್ಯಾಪ್ತಿಯಲ್ಲಿನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಜತೀನ್ ಇತರರು ಇದ್ದರು.
