Advertisement
11:05 AM Monday 4-December 2023

ದಕ್ಷಿಣ ಕೊಡಗು : ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ಸ್ಪರ್ಶ : ಇಬ್ಬರ ಸಾವು

22/02/2023

ಮಡಿಕೇರಿ ಫೆ.22 : ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ಸ್ಪರ್ಶಗೊಂಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ದಿನ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಶ್ರೀಮಂಗಲ ಹಾಗೂ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಅಬ್ರುದ್ದೀನ್(31) ಹಾಗೂ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಇಸ್ಮಾಯಿಲ್ ಹುಸೇನ್ (33) ಮೃತ ದುರ್ದೈವಿಗಳಾಗಿದ್ದಾರೆ.
ನಾಲ್ಕೇರಿ ಗ್ರಾಮದ ಸ್ಥಳೀಯ ಬೆಳೆಗಾರರ ತೋಟವೊಂದರಲ್ಲಿ ಬೆಳಗೆ 8.30 ಗಂಟೆಯ ವೇಳೆಗೆ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ತಗುಲಿದಾಗ ಆಘಾತಕ್ಕೊಳಗಾದ ಅಬ್ರುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕÀ ರವಿಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು. ಈ ಘಟನೆ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
::: ಮತ್ತೊಂದು ಸಾವು :::
ಹುದಿಕೇರಿ ಹೋಬಳಿಯ ಹೈಸೊಡ್ಲುರೂ ಗ್ರಾಮದ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಇಸ್ಮಾಯಿಲ್ ಹುಸೇನ್(37) ಕರಿ ಮೆಣಸು ಕುಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಏಣಿ ಸ್ಪರ್ಶಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗೋಣಿಕೊಪ್ಪಲಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ವಿರುಪಾಕ್ಷ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.
::: ಪರಿಹಾರಕ್ಕೆ ಒತ್ತಾಯ :::
ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ಬಳಿಕ ಕೊಡಗು ರೈತ ಸಂಘದ ಪ್ರಮುಖರು ಜಮಾಯಿಸಿ ಚೆಸ್ಕಾಂ ಇಲಾಖೆ ಮೃತ ಕಾರ್ಮಿಕನ ಅಂತ್ಯಸAಸ್ಕಾರಕ್ಕೆ ಮಾನವೀಯ ಪರಿಹಾರ ನೀಡಬೇಕೆಂದು ಇದೇ ಸಂದರ್ಭ ಚೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು. ಎಲ್ಲಾ ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ತೋಟಗಳ ಒಳಗೆ ಕೆಳ ಮಟ್ಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ಗಳನ್ನು ದುರಸ್ತಿ ಮಾಡಬೇಕು ಎಂದು ಕೊಡಗು ರೈತ ಸಂಘದ ಗೌರವಾಧ್ಯಕ್ಷ ಚಿಮ್ಮಂಗಡ ಗಣೇಶ್ ಒತ್ತಾಯಿಸಿದರು.