Advertisement
2:31 AM Saturday 2-December 2023

ಅವಧಿ ಪೂರ್ಣಗೊಂಡ ನಂತರವೂ ಆಸ್ತಿಯನ್ನು ಘೋಷಿಸಿಕೊಳ್ಳಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ

27/02/2023

ಮಡಿಕೇರಿ ಫೆ.27 : ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳಬೇಕು ಎನ್ನುವ ನಿಯಮ ಜಾರಿಯಲ್ಲಿದೆ. ಇದರ ಪಾಲನೆಯೊಂದಿಗೆ 5 ವರ್ಷಗಳ ಅವಧಿ ಪೂರ್ಣಗೊಳ್ಳುವ ಸಂದರ್ಭವೂ ಎಲ್ಲಾ ಜನಪ್ರತಿನಿಧಿಗಳು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ನ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾರ್ಯಾಂಗವನ್ನು ಹಿಡಿತದಲ್ಲಿಟ್ಟು ಪಾರದರ್ಶಕ ಆಡಳಿತ ನೀಡುವ ಜವಾಬ್ದಾರಿಯನ್ನು ಹೊತ್ತಿರುವ ಶಾಸಕಾಂಗ ಇಂದು ಹಾದಿ ತಪ್ಪುತ್ತಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗುತ್ತಿದೆ, ಇದರಿಂದ ಜನ ಬೇಸತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು 10 ರಿಂದ 100 ಕೋಟಿ ರೂ.ಗಳವರೆಗೆ ಖರ್ಚು ಮಾಡಲು ಸಿದ್ಧರಿದ್ದಾರೆ. ನ್ಯಾಯಯುತವಾಗಿ ಬೆವರು ಸುರಿಸಿ ದುಡಿದ ಹಣವನ್ನು ಈ ರೀತಿ ಖರ್ಚು ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. ಆದ್ದರಿಂದ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಚುನಾವಣೆಗೆ ಸ್ಪರ್ಧಿಸುವಾಗ ನೀಡಿದ ಆಸ್ತಿಯ ಮೌಲ್ಯಕ್ಕೂ 5 ವರ್ಷಗಳ ನಂತರದ ಮೌಲ್ಯಕ್ಕೂ ಇರುವ ವ್ಯತ್ಯಾಸವನ್ನು ಜನರೆದುರು ತೆರೆದಿಡುವ ನಿಯಮವನ್ನು ಚುನಾವಣಾ ಆಯೋಗ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾನ್ಯ ವ್ಯಕ್ತಿಯಂತೆ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳು 5 ವರ್ಷಗಳ ನಂತರ ಲಕ್ಷಾಧಿಪತಿಯಾಗುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಗ್ರಾ.ಪಂ, ತಾ.ಪಂ, ಜಿ.ಪಂ, ಪುರಸಭೆ, ನಗರಸಭೆಯಿಂದ ಆರಂಭಗೊoಡು ಸಂಸತ್ ವರೆಗಿನ ಜನಪ್ರತಿನಿಧಿಗಳು ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವುದು ಕಂಡು ಬಂದಿದೆ. ನಿವೇಶನ, ವಸತಿ, ವಾಹನ, ಕೈಗಾರಿಕೆ, ತೋಟ, ಲೇಔಟ್ ಸೇರಿದಂತೆ ಚಿನ್ನಾಭರಣ ಮತ್ತು ಆಸ್ತಿಗಳು ಹೆಚ್ಚುತ್ತಲೇ ಹೋಗುತ್ತದೆ. ಕಾನೂನಿನ ಕಣ್ಣಿಗೆ ಮಣ್ಣೆರೆಚಲು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಸ್ತಿಯ ದಾಖಲೆಗಳನ್ನು ಮಾಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಜನರು ನ್ಯಾಯಯುತವಾಗಿ ದೇಶದ ಅಭಿವೃದ್ಧಿಗಾಗಿ ಪಾವತಿಸಿದ ತೆರಿಗೆ ಹಣ ಇಂದು ಭ್ರಷ್ಟರ ಪಾಲಾಗುತ್ತಿದೆ. ಕಾಮಗಾರಿಗಳು ಕಳಪೆಯಾಗುತ್ತಿದೆ, ಯೋಜನೆಗಳು ನೆನೆಗುದಿಗೆ ಬೀಳುತ್ತಿವೆ. ಇದಕ್ಕೆಲ್ಲ ಭ್ರಷ್ಟತೆಯಿಂದ ಕೂಡಿರುವ ಕಲುಷಿತ ರಾಜಕಾರಣ ಪ್ರಮುಖ ಕಾರಣವಾಗಿದೆ.
ಭ್ರಷ್ಟರು ಕೋಟಿ, ಕೋಟಿ ಸಂಪಾದನೆ ಮಾಡಿ ಚುನಾವಣೆಯನ್ನು ಎದುರುಸುತ್ತಾರೆ. ಇದರಿಂದ ಪ್ರಾಮಾಣಿಕ ರಾಜಕಾರಣಿಯೊಬ್ಬ ಹಣವಿಲ್ಲದೆ ಚುನಾವಣೆಯನ್ನು ಎದುರಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಾಮಾನ್ಯ ವ್ಯಕ್ತಿಯೂ ಚುನಾವಣೆಯಲ್ಲಿ ಸ್ಪರ್ಧಿಸುವಂತ್ತಾಗಬೇಕು, ಕೋಟ್ಯಾಧಿಪತಿಯೇ ಚುನಾವಣಾ ಕಣದಲ್ಲಿ ಉಳಿಯುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಏನು ಅರ್ಥ ಬಂತು ಎಂದು ಹರೀಶ್ ಜಿ.ಆಚಾರ್ಯ ಪ್ರಶ್ನಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಮತ್ತು ಅಧಿಕಾರವಧಿ ಪೂರ್ಣಗೊಂಡ ನಂತರ ಜನಪ್ರತಿನಿಧಿಗಳ ಆಸ್ತಿಯಲ್ಲಾದ ವ್ಯತ್ಯಾಸಗಳ ಬಗ್ಗೆ ತೆರಿಗೆ ಇಲಾಖೆ ನಿಗಾ ವಹಿಸಬೇಕು. ಎರಡು ಬಾರಿ ಆಸ್ತಿಯನ್ನು ಬಹಿರಂಗವಾಗಿ ಘೋಷಿಸಿಕೊಳ್ಳಲು ಚುನಾವಣಾ ಆಯೋಗ ನಿಯಮ ರೂಪಿಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.