ನಾಪೋಕ್ಲು ಫೆ.28 : ಪ್ರತಿಯೊಬ್ಬರೂ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಪ್ರಾಮುಖ್ಯತೆ ನೀಡಿದರೆ ಮಾತ್ರ ಶಾಂತಿಯಿಂದ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು.
ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಎಮ್ಮೆಮಾಡು ಮಖಾಂ ಉರೂಸ್ ನ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ಅವರ ಜೀವನ ಚರಿತ್ರೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 14ನೇ ಶತಮಾನದ ಜೀವನ ಚರಿತ್ರೆಯಾಗಿದೆ. ಇಸ್ಲಾಂ ಧರ್ಮವು ಶಾಂತಿಯ ಧರ್ಮವಾಗಿದ್ದು ಇಲ್ಲಿ ಯಾರಿಗೂ ಅಶಾಂತಿಯನ್ನು ಮೂಡಿಸಲು ಕಲಿಸಿಕೊಟ್ಟಿಲ್ಲ. ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ದರ್ಗಾ ಮತ್ತು ದೇವಾಲಯಗಳಲ್ಲಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುತ್ತಾರೆ. ಇದು ಹಿಂದಿನ ಕಾಲದಿಂದಲೂ ರಾಜ್ಯದ ಕೆಲವು ಕಡೆಗಳಲ್ಲಿ ಎಲ್ಲಾ ಧರ್ಮದವರು ಒಗ್ಗೂಡಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುವಂತಹ ಪದ್ಧತಿ, ಅದು ಕೆಲವು ಕಡೆಗಳಲ್ಲಿ ಈಗಲೂ ನಡೆಯುತ್ತಿದೆ. ಇದರಿಂದ ಕೆಲವು ಮಂದಿರಗಳಲ್ಲಿ ಮುಸ್ಲಿಮರ ಮೊಹರಂ, ಈದ್ ಆಚರಣೆ ನಡೆಯುತ್ತದೆ, ಅದೇ ರೀತಿ ದರ್ಗಾಗಳ ವಠಾರಗಳಲ್ಲಿ ಅನ್ಯಧರ್ಮಿಯರ ಆಚರಣೆಗಳು ನಡೆಯುತ್ತದೆ. ಆದ್ದರಿಂದ ದರ್ಗಾ ಮತ್ತು ಮಂದಿರದ ವಠಾರಗಳಲ್ಲಿ ಕುರುಹುಗಳು ಸಿಕ್ಕಿದರೆ ಅದು ನಮ್ಮದು ಎಂಬ ಮೌಢ್ಯವನ್ನು ಯಾವತ್ತೂ ತೋರಿಸಬಾರದು ಎಂದರು.
ದೇಶದ ಸಂವಿಧಾನ ಮತ್ತು ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಮುಸ್ಲಿಂ ಮಹಿಳೆಯರ ಧಾರ್ಮಿಕ ಹಕ್ಕಾಗಿದೆ ಹಿಜಾಬ್,ರಾಜ್ಯ ಹೈಕೋರ್ಟ್ ನಲ್ಲಿ ನಮಿಗೆ ನ್ಯಾಯಾ ಸಿಕ್ಕಿಲ್ಲ, ಇಸ್ಲಾಮಿನ ಧಾರ್ಮಿಕ ಹಕ್ಕನ್ನು ಯಾರಿಂದಲೂ ಖಸಿದುಕೊಳ್ಳಲು ಸಾಧ್ಯವಿಲ್ಲ,ನಾವು ಬಿಡುವುದು ಇಲ್ಲಾ,ಆದ್ದರಿಂದ ಸಂವಿಧಾನಿಕವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಅಲ್ಲಿ ನ್ಯಾಯಾಸಿಗುವ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಎಲ್ಲರನ್ನೂ ಒಗ್ಗೂಡಿಸುವ ಇಂತಹ ಪುಣ್ಯಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೂವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಮತ್ತು ಸಮಾಜದಲ್ಲಿ ಸೌಹಾರ್ದತೆ, ಸಹೋದರತೆ ಬೆಳೆಯಲು ಸಾಧ್ಯವಾಗಲಿದೆ ಎಂದು ಸಮಾರಂಭಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮೌಲಾನ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.
ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಸಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್ ತಂಙಳ್ , ಜಿಲ್ಲಾ ನಾಹಿಬ್ ಖಾಝಿ ಶಾದುಲಿ ಫೈಝಿ, ರಾಜ್ಯ ವಖ್ಫ್ ಮಂಡಳಿ ಉಪಾಧ್ಯಕ್ಷ ಯಾಕೋಬ್ ಬೆಂಗಳೂರು, ವಕ್ಫ್ ಮಂಡಳಿ ಸಿ ಇ ಓ ಅಬ್ದುಲ್ ಖಾದರ್ ಶಾ,ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಮೂಗರ್ಪಣೆ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ಹಕೀಂ, ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷ ಸುತನ್ ಸುಬ್ಬಯ್ಯ,ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಚ್ ಹಂಸ, ಜಮಾಅತ್ ಮಾಜಿ ಅಧ್ಯಕ್ಷ ಉಸೈನ್ ಸಖಾಫಿ, ಇಲ್ಯಾಸ್ ತಂಙಳ್ ,ನೆರೂಟ್ ಆಲಿ, ಮಾಹಿನ್ ಚಂಬರಂಡ, ಕೆಪಿಸಿಸಿ ಸದಸ್ಯ ಯಾಕೂಬ್ ಸೋಮವಾರಪೇಟೆ, ಇಬ್ರಾಹಿಂ, ಅಶ್ರಫ್ ಬಿ.ಯು, ಫಾರೂಕ್ ಅಹಮದ್, ಹಾಗೂ ಉಲಮಾಗಳು, ಉಮಾರಗಳು, ಗಣ್ಯವ್ಯಕ್ತಿಗಳು,ಜಮಾಅತ್ ಪದಾಧಿಕಾರಿಗಳು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಉರುಸ್ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಹೊರಜಿಲ್ಲೆ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ :ಝಕರಿಯ ನಾಪೋಕ್ಲು






