Advertisement
10:04 AM Sunday 3-December 2023

ಮೇಕೇರಿ ತಿರುವಿನಲ್ಲಿ ಮಗುಚಿದ ಲಾರಿ

28/02/2023

ಮಡಿಕೇರಿ ಫೆ.28 : ಚಾಲಕನ ನಿಯಂತ್ರಣ ತಪ್ಪಿದ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಮೇಕೇರಿ ಬಳಿ ನಡೆದಿದೆ.
ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಪೊನ್ನಂಪೇಟೆ ತಾಲೂಕಿನ ಹುದಿಕೇರಿಗೆ ಲಾರಿಯಲ್ಲಿ ಗೊಬ್ಬರ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯ ಮಾಹಿತಿ ಅರಿಯದೆ ಮಡಿಕೇರಿಗೆ ಆಗಮಿಸಿ ಜನರಲ್ ತಿಮ್ಮಯ್ಯ ವೃತ್ತದಿಂದ ವಿರಾಜಪೇಟೆ ಮಾರ್ಗಕ್ಕಾಗಿ ಹುದಿಕೇರಿ ಕಡೆಗೆ ಲಾರಿ ಚಲಾಯಿಸಿದ್ದಾರೆ.
ಮೇಕೇರಿ ಮಸೀದಿ ಬಳಿಯ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಗೊಬ್ಬರ ಚೀಲಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು, ಕೆಲವು ಚೀಲಗಳಿಗೆ ಹಾನಿಯಾಗಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕ್ರೇನ್‍ಗಳ ಸಹಾಯದಿಂದ ಲಾರಿಯನ್ನು ಮೇಲೆತ್ತಲಾಗಿದೆ. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಸುಣ್ಣ ಸಾಗಿಸುತ್ತಿದ್ದ ಲಾರಿಯೊಂದು ಮಗುಚಿ ಬಿದ್ದಿತ್ತು.