Advertisement
3:33 AM Friday 8-December 2023

ಮಡಿಕೇರಿ : ಹುಲಿ ಉಗುರು, ನಕ್ಷತ್ರ ಆಮೆ ಮಾರಾಟ ಯತ್ನ : ಇಬ್ಬರು ಆರೋಪಿಗಳ ಬಂಧನ

04/03/2023

ಮಡಿಕೇರಿ ಮಾ.4 : ಹುಲಿ ಉಗುರು ಮತ್ತು ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬoಧಿಸಿದoತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
::: ಹುಲಿ ಉಗುರು :::
ಶ್ರೀಆಂಜನೇಯ ದೇವಸ್ಥಾನದಿಂದ ದೇಚೂರಿಗೆ ತೆರಳುವ ರಸ್ತೆಯಲ್ಲಿ ಪಿ.ಬಿ.ಸೂರ್ಯ ಪ್ರಕಾಶ್ ಎಂಬಾತ ಹುಲಿಯ 4 ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಮಾಹಿತಿ ಅರಿತ ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಹುಲಿ ಉಗುರು ಸಹಿತ ಆರೋಪಿಯನ್ನು ವಶಕ್ಕೆ ಪಡೆದರು.
::: ನಕ್ಷತ್ರ ಆಮೆ :::
ನಗರದ ಶ್ರೀಓಂಕಾರೇಶ್ವರ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಬಿ.ವೇಣು ಎಂಬಾತ ಅಳಿವಿನಂಚಿನಲ್ಲಿರುವ ಒಂದು ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ ಎನ್ನುವ ಆರೋಪದಡಿ ದಾಳಿ ನಡೆಸಿದ ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಒಂದು ಜೀವಂತ ನಕ್ಷತ್ರ ಆಮೆಯನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್ ಚಂದ್ರ, ಸಿಐಡಿ ಪೊಲೀಸ್ ಅರಣ್ಯ ಘಟಕದ ಕೊಡಗು ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಸಿಬ್ಬಂದಿಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ್, ಸ್ವಾಮಿ ಮತ್ತು ಮಂಜುನಾಥ್ ಅವರುಗಳು ಕಾರ್ಯಾಚರಣೆ ನಡೆಸಿದರು.