*ಮಡಿಕೇರಿ : ‘ನಮ್ಮ ನಡೆ ಮತಗಟ್ಟೆಯ ಕಡೆ’ : ಜಾಥ ಮತ್ತು ಧ್ವಜಾರೋಹಣ*

ಮಡಿಕೇರಿ ಏ.30 : ವಿಧಾನಸಭಾ ಚುನಾವಣೆಯ ಮತದಾನದಂದು ತಪ್ಪದೆ ಅರ್ಹರೆಲ್ಲರೂ ಮತದಾನ ಮಾಡುವಂತಾಗಲು ‘ನಮ್ಮ ನಡೆ ಮತಗಟ್ಟೆಯ ಕಡೆಗೆ’ ಕಾರ್ಯಕ್ರಮ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಾಥವು ಭಾನುವಾರ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನದಂದು ಅರ್ಹರೆಲ್ಲರೂ ಮತ ಹಕ್ಕು ಚಲಾಯಿಸಬೇಕು ಎಂದು ಕೋರಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಸ್ವೀಪ್ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಅರ್ಹರು ತಪ್ಪದೆ ಮತ ಚಲಾಯಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯು ಅವರು ಮಾತನಾಡಿ ಮತದಾನಕ್ಕೆ ಅರ್ಹರಾಗಿರುವ ಎಲ್ಲರೂ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಲು ಮುಂದಾಗಬೇಕು ಎಂದು ಕೋರಿದರು.
ಜಿಲ್ಲಾಡಳಿತ, ಸ್ವೀಪ್ ಸಮಿತಿ ಜತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮತದಾನದ ಮಹತ್ವ ಕುರಿತು ಸಂದೇಶ ಸಾರುವಲ್ಲಿ ಜಾಥ ಏರ್ಪಡಿಸಲಾಗಿದೆ. ಆ ನಿಟ್ಟಿನಲ್ಲಿ ‘ಯುವ ಮತದಾರರು ತಪ್ಪದೆ ಮತ ಹಕ್ಕು ಚಲಾಯಿಸಬೇಕು. ಇದರಿಂದ ಇಡೀ ವಿಶ್ವದಲ್ಲಿ ಮಾದರಿಯಾದ ಸಂವಿಧಾನ ಒಳಗೊಂಡಿರುವ ಪ್ರಜೆಗಳ ಪ್ರಭುತ್ವವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಕೆ.ಟಿ.ಬೇಬಿಮ್ಯಾಥ್ಯು ಅವರು ಅಭಿಪ್ರಾಯಪಟ್ಟರು.’
ಕೊಡಗು ಜಿಲ್ಲೆಯ ಎಲ್ಲೆಡೆ ಮತದಾನದ ಜಾಗೃತಿಯನ್ನು ವಿವಿಧ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರ ಸಲಹೆಯಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮೇ 5 ರಂದು ನಗರದಲ್ಲಿ ಮತದಾರರ ಜಾಗೃತಿ ಜಾಥವನ್ನು ಆಯೋಜಿಸಲಾಗುತ್ತಿದೆ ಎಂದರು.
ಜಾಥಾವು ಮಂಗೇರಿರ ಮುತ್ತಣ್ಣ ವೃತ್ತ, ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ವೃತ್ತದ ಮೂಲಕ ಹಿಲ್ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತಲುಪಿತು.
ವಿಧಾನಸಭಾ ಚುನಾವಣೆಯ ಜಿಲ್ಲಾ ರಾಯಭಾರಿ ಕೆ.ರವಿಮುತ್ತಪ್ಪ, ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ರಾಜಗೋಪಾಲ್, ನವೀನ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಅನಿಲ್ ಎಚ್.ಟಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ.ವಸಂತಿ, ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಜಿಲ್ಲಾ ಸ್ಥಾನಿಕ ಆಯುಕ್ತರಾದ ಎಚ್.ಆರ್.ಮುತ್ತಪ್ಪ, ಡೈಸಿ, ಸಿ.ಪಿ.ಕುಟ್ಟಪ್ಪ, ವಿಲ್ಪರ್ಡ್ ಕ್ರಾಸ್ತ, ಕೆ.ಯು.ರಂಜಿತ್, ಕೆ.ಬಿ.ಉಷಾರಾಣಿ, ಪ್ರಸನ್ನ, ವಿನಯಿ ಜಾಯ್ಸ್, ವಸಂತ್ ಕುಮಾರ್, ಸರೋಜಿನಿ ದೇವಿ, ಬೋಪಣ್ಣ, ಬೂತ್ ಮಟ್ಟದ ಅಧಿಕಾರಿಗಳಾದ ಸುಮತಿ, ಬಷೀರ್ ಇತರರು ಇದ್ದರು.
ಧ್ವಜಾರೋಹಣ: ನಮ್ಮ ನಡೆ ಮತಗಟ್ಟೆ ಕಡೆಗೆ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಭಾನುವಾರ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಆ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ನಗರದ ಹಿಲ್ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.
ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಅರ್ಹರೆಲ್ಲರೂ ಮತದಾನ ಮಾಡುವಂತಾಗಲು ಮಾಹಿತಿ ನೀಡುವಂತಾಗಬೇಕು. ಅರ್ಹರು ಮತದಾನ ಮಾಡಲು ಹಿಂದೆ ಸರಿಯಬಾರದು, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸೆಕ್ಟರ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ನೇತೃತ್ವದಲ್ಲಿ ಆಯಾಯ ಮತಗಟ್ಟೆ ವ್ಯಾಪ್ತಿಯಲ್ಲಿ ಧ್ವಜಾರೋಹಣ ನಡೆಯಿತು.
