ಮಡಿಕೇರಿ ಜೂ.29 : ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ., ಶಾಲೆಯ ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ದೂರದೃಷ್ಠಿಯಿಂದ ಬೆಂಗಳೂರು ಇಂದು ಬೃಹತ್ತಾಗಿ ಬೆಳೆದಿದೆ. ಬೆಂಗಳೂರು ನಗರ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ಕೆರೆಗಳ ನಿರ್ಮಾಣಕ್ಕೂ ನೀಡಿದ್ದಾರೆ ಎಂದರು.
ಕೆಂಪೇಗೌಡರ ವ್ಯಕ್ತಿತ್ವ, ಆಡಳಿತ ವ್ಯವಸ್ಥೆ ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ, ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡರು ವ್ಯವಸಾಯ, ವ್ಯಾಪಾರ – ಮಾರುಕಟ್ಟೆ, ಕೆರೆ-ಕಟ್ಟೆ, ಕೃಷಿ, ಸಣ್ಣ ಕೈಗಾರಿಕೆ, ಶಿಕ್ಷಣ, ಧಾರ್ಮಿಕ ಸ್ಥಳ ಹೀಗೆ ಎಲ್ಲ ಕ್ಷೇತ್ರಕ್ಕೂ ವಿಶೇಷ ಗಮನ ಹರಿಸಿ ಅಂದಿಗೇ ಭವ್ಯ ಬುನಾದಿಯೊಂದನ್ನು ಹಾಕಿ, ಅದು ಸರಿ ದಾರಿಯಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಯಶಸ್ಸು ಸಿಗುವ ದಾರಿಯಲ್ಲಿ ಶ್ರಮವಹಿಸಿ ತಮ್ಮ ಅಧಿಕಾರವಧಿಯುದ್ದಕ್ಕೂ ನಡೆದುಕೊಂಡರು.
ಶಿಕ್ಷಕರಾದ ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಬಿ.ಎಸ್.ಅನ್ಸಿಲಾ ರೇಖಾ, ನಯನ ಹಾಜರಿದ್ದರು.







