ಮಡಿಕೇರಿ ಆ.24 : ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಲ್ಲಿ 50 ಕೆ.ಜಿ.ತೂಕದ ನಾಲ್ಕು ಕಾಫಿ ಚೀಲಗಳನ್ನು ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲ್ದಾರೆ ಗ್ರಾಮದ ಪ್ರಜ್ವಲ್(22), ಪಿರಿಯಾಪಟ್ಟಣ ರಾಣಿಗೇಟ್ ನಿವಾಸಿಗಳಾದ ರವಿ (34), ಗಣೇಶ (32), ಸ್ವಾಮಿ (23) ಎಂಬವರನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಲೆಸ್ಲಿ ಪಿಂಟೋ ಎಂಬವರ ತೋಟದ ಸಂಗ್ರಹಣ ಕೊಠಡಿಯಲ್ಲಿ ಇಟ್ಟಿದ್ದ ಕಾಫಿ(ಚೆರಿ) ಚೀಲಗಳನ್ನು ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಮಡಿಕೇರಿ ಉಪವಿಭಾಗಧಿಕಾರಿ ಡಿವೈಎಸ್‍ಪಿ ಎಂ.ಜಗದೀಶ್, ಮಡಿಕೇರಿ ನಗರ ವೃತ್ತ ಸಿಪಿಐ ಅನೂಪ್ ಮಾದಪ್ಪ ಹಾಗೂ ರಾಘವೇಂದ್ರ, ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯಾನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಮಾಹಿತಿ ನೀಡಲು ಸೂಚನೆ : ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ.ತಂತ್ರಾಂಶದ ಮೂಲಕ ಮಾಹಿತಿ ನೀಡುವಂತೆ ಹಾಗೂ ಅನಾಮದೇಯ ಪತ್ರದ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುದಿಲ್ಲ ಎಂದು ತಿಳಿಸಿದ್ದಾರೆ.







