ಸೋಮವಾರಪೇಟೆ ಆ.25 : ಹರಗ ಗ್ರಾಮದಲ್ಲಿ ಜೇನು ಕೃಷಿಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರವೀಣ್, ಸರ್ಕಾರದ ಯೋಜನೆಗಳು ಮತ್ತು ಕೃಷಿ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಔಷಧಯುಕ್ತ ಹಾಗೂ ಉತ್ತಮ ಗುಣಮಟ್ಟದ ಜೇನು ಉತ್ಪಾದನೆಯಾಗುತ್ತಿದ್ದು, 1990ರಿಂದ ಜೇನು ಹುಳುಗಳಿಗೆ ಥಾಯ್ ಸ್ಯಾಕ್ ಬ್ರೂಡ್ ವೈರಸ್ ನಿಂದಾಗಿ ಉತ್ಪಾದನೆ ಕುಂಠಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ರೈತರ ಉಪ ಕಸುಬು ಜೇನು ಕೃಷಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಸಹಾಯಧನದಲ್ಲಿ ಒಂದೊಂದು ಜೇನುಪೆಟ್ಟಿಗೆಯನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ರೈತರಿಗೆ ಉಪ ಕಸುಬಾದ ಜೇನು ಸಾಕಾಣೆ ಯಾವುದೇ ಕಾರ್ಮಿಕರ ನೆರವನ್ನು ಬಯಸದೇ ಲಾಭ ತಂದುಕೊಡುತ್ತದೆ. ಇದರಲ್ಲಿ ಮನೆಯವರು ಮಾತ್ರ ಕೆಲಸ ಮಾಡಿದರೆ, ನಾವು ಎಷ್ಟು ಪ್ರಮಾಣದಲ್ಲಿ ಜೇನು ಪೆಟ್ಟಿಗೆಯನ್ನಿಟ್ಟು ಸಾಕುತ್ತೇವೆಯೋ ಅಷ್ಟು ಲಾಭಗಳಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಕೃಷಿ ಚಟುವಟಿಕೆಯೊಂದಿಗೆ ಮಹಿಳೆಯರು ಕೃಷಿ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಶೆಟ್ಟಿ, ತಾಂತ್ರಿಕ ಸಲಹೆಗಾರರಾದ ಪ್ರಸಾದ್, ರಾಜು, ಹೇಮಂತ್, ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತ ವಿಜಯ್ ಇದ್ದರು. ಹರಗ ಗ್ರಾಮದ ಜೇನು ಕೃಷಿಕರಾದ ಧರ್ಮಪ್ಪ, ಕುಶಾಲಪ್ಪ, ಕಾರ್ತಿಕ್, ಶರತ್, ನಾಗೇಶ, ಗಣಪತಿ, ದೀಲೀಪ್, ರಮೇಶ, ಶರಣ್ ಗೌಡ ಸೇರಿದಂತೆ ಹಲವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.







