ಮಡಿಕೇರಿ ಆ.26 : ಭಾರತ ಸೇವಾದಳ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಸಂತ ಮೈಕಲರ ಶಾಲೆಯಲ್ಲಿ ಡಾ. ನಾ.ಸು ಹರ್ಡಿಕರ್ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟಕ ಜಿ.ಇ.ರೇವಣ್ಣ ಮಾತನಾಡಿ, ಭಾರತ ಸೇವಾದಳ ಸೇರಿದಂತೆ ಹಲವು ಸಮಾಜ ಮುಖಿ ಚಿಂತನೆಯ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಭಾರತ ಸೇವಾದಳ ಸಂಸ್ಥಾಪಕರಾದ ನಾ.ಸು. ಹರ್ಡೀಕರ್ ಅವರ ತತ್ವಾದರ್ಶಗಳನ್ನು ನಾವು ರೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಭಾರತ ಸೇವಾದಳ ಎಂದೊಡನೆ ನೆನಪಿಗೆ ಬರುವ ಹೆಸರೇ ಡಾ.ನಾರಾಯಣ್ ಸುಬ್ಬರಾವ್ ಹರ್ಡಿಕರ್, ಇವರು ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕಿನ ತಿಳವಳ್ಳಿ ಗ್ರಾಮದಲ್ಲಿ 1889ನೇ ಮೇ 7 ರಂದು ಸುಬ್ಬರಾವ್ ಹಾಗೂ ಯಮುನಬಾಯಿ ಅವರ 7ನೇ ಪುತ್ರರಾಗಿ ಜನಿಸಿದರು ಎಂದರು.
ಜಿಲ್ಲಾ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಭಾ.ಸೇ.ದ ಸಂಘಟನ ಕೌಶಲ್ಯತೆಯನ್ನು, ದೇಶಾಭಿಮಾನ, ರಾಷ್ಟ್ರೀಯತೆ ಹಾಗೂ 1924ರ ಬೆಳಗಾವಿ ಅಧಿವೇಶನದಲ್ಲಿ ಇವರ ಮುಂದಾಳತ್ವವನ್ನು ವಿದಿವತ್ತಾದ, ದ್ವಜವಂದನೆ ಹಾಗೂ ಸ್ವಯಂ ಸೇವಕರ ಶಿಸ್ತು, ಸಂಯಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂತ ಮೈಕಲರ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮ ಸಿಸ್ಟರ್ ಮತ್ತು ಸಿಬ್ಬಂದಿ ವರ್ಗದವರಾದ ರಜೀನ, ಎಲಿಜಾ, ಕೇಶವ, ಶಿಕ್ಷಕರಾದ ಸುನಿತ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.







