Advertisement
9:44 AM Sunday 3-December 2023

*ವಿರಾಜಪೇಟೆ : ಆಟೋ ಚಾಲಕರು ಸಾರ್ವಜನಿಕರ ಒಡನಾಡಿಯಾಗಿ ಕೆಲಸ ನಿರ್ವಹಿಸಬೇಕು : ಶಾಸಕ ಎ.ಎಸ್.ಪೊನ್ನಣ್ಣ*

30/09/2023

ವಿರಾಜಪೇಟೆ ಸೆ.30 : ಆಟೋ ಚಾಲಕರು ಶ್ರಮಿಕ ವರ್ಗದವರು, ಬಡ, ಶ್ರೀಮಂತ ಎಂಬ ಭೇದವಿಲ್ಲದೆ ಸಾರ್ವಜನಿಕರೊಂದಿಗೆ ಸ್ನೇಹ ಜೀವಿಯಾಗಿ ಸ್ಪಂದಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ವಿರಾಜಪೇಟೆಯ ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ
ನಗರದ ಕಾರು ನಿಲ್ದಾನದ ದಿ.ಮಾಳೇಟಿರ ಬಿದ್ದಪ್ಪ (ಬಿದ್ದು) ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಆಟೋ ಚಾಲಕರು ಗ್ರಾಹಕರಿಂದ ಬರುವ ಬಾಡಿಗೆ ಹಣವನ್ನು ಕ್ರೋಡಿಕರಿಸಿ ಮಾಲೀಕ ಮತ್ತು ತನ್ನ ಸಂಸಾರವನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ಆರ್ಥಿಕವಾಗಿ ಸಭಲರಾಗಲು ಕಷ್ಟ ಸಾದ್ಯವಾದರು, ಜೀವನದಲ್ಲಿ ಮುಂದು ಬರಲು ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ಸಂಘ ಸ್ಥಾಪಿಸಿ ಹಲವು ಜನಪರ ಕಾರ್ಯಕ್ರಮ, ಸದಸ್ಯರ ಮಕ್ಕಳಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಸಂಘದ ಬೇಡಿಕೆಯಂತೆ ಜಿಲ್ಲೆಯಾದ್ಯಂತ ಆಟೋ ಚಾಲನೆ ಮಾಡಲು ಪರವಾನಿಗೆ ನೀಡುವ ಬೇಡಿಕೆಯನ್ನು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕಾನೂನು ಅಡಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಬಡವರ ಬಂದು ಎಂದು ಕರೆಸಿಕೊಂಡವರು ಆಟೋ ಚಾಲಕರು. ಸೇವೆ ಮಾತ್ರ ಪರಗಣಿಸದೇ ಸಂಘದಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸನ್ನು ಕಂಡಿದ್ದಾರೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅದ್ಯಕ್ಷ ಎನ್.ಎಸ್.ಶಿವು ಆಟೋ ಚಾಲಕ ಮತ್ತು ಮಾಲೀಕರು ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಘವು ಸಾರ್ವಜನಿಕ ಸೇವೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದರು.

ಸಂಘದ ಕಾನೂನು ಸಲಹೆಗಾರ ಮತ್ತು ವಕೀಲರಾದ ಪುಷ್ಪರಾಜ್, ಗೌರವಾಧ್ಯಕ್ಷ ಮಾಜಿ ಸೈನಿಕ ಪ್ರಭು ಕುಟ್ಟಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕಾಫಿ ಬೆಳೆಗಾರ ಮಾಳೆಟೀರ ಚುಕ್ಕು ದೇವಯ್ಯ, ಮೈಸೂರು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ ಪ್ರಮುಖ ಡಾ. ಶುಶೃತ್ ಗೌಡ ಮಾತನಾಡಿದರು.

ಸಂಘದ ಉಪಧ್ಯಕ್ಷ ಜಗದೀಶ್, ಸಹ ಕಾರ್ಯದರ್ಶಿ ಜಕೋಬ್ ನರೋನ, ಖಜಾಂಚಿ ಆರ್ಜುನ್ ತಿಮ್ಮಯ್ಯ, ಗೌರವ ಸಲಹೆಗಾರ ಪ್ರದೀಪ್ ಕುಮಾರ್, ನಿರ್ದೇಶಕರಾದ ಬೀಕಚಂಡ ಪುಟ್ಟ ಬೆಳ್ಯಪ್ಪ, ಕಿರಣ್, ದಿನೇಶ್ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಡುವಮಂಡ ಜೀವನ್ ಸಂಘ ನಡೆಸಿದ ವಾರ್ಷಿಕ ಕಾರ್ಯಕ್ರಮಗಳ ವರದಿ ವಾಚನ ಮಾಡಿದರು.

ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ವಿವಿಧ ಶಾಲಾ ಕಾಲೆಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಮೈಸೂರು ಸ್ವರ ಸಂಗಮ ಮೆಲೋಡಿಯಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ವರದಿ : ಕಿಶೋರ್ ಕುಮಾರ್ ಶೆಟ್ಟಿ