*ಆಹಾರ ಪದಾರ್ಥ ವ್ಯರ್ಥ ಮಾಡಬೇಡಿ: ಶಾಸಕ ಡಾ.ಮಂತರ್ ಗೌಡ ಶಾಸಕ ಸಲಹೆ*

ಮಡಿಕೇರಿ ಸೆ.30 : ಆಹಾರ ಪದಾರ್ಥಗಳನ್ನು ಎಂದಿಗೂ ವ್ಯರ್ಥ ಮಾಡದೇ ಅಗತ್ಯಕ್ಕೆ ತಕ್ಕಷ್ಟು ಸೇವಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ.)ವತಿಯಿಂದ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಆಹಾರ ನಷ್ಟ ಮತ್ತು ತ್ಯಾಜ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮದ ಸಿಗ್ನೇಚರ್ ಕ್ಯಾಂಪೇನ್‍ನಲ್ಲಿ ಸಹಿ ಮಾಡಿ ಮಾತನಾಡಿದರು.
ಪ್ರತಿ ನಿತ್ಯ ಹೋಟೆಲ್ ಮತ್ತು ರೆಸಾರ್ಟ್‍ಗಳಲ್ಲಿ ಸಾಕಷ್ಟು ಆಹಾರ ಪದಾರ್ಥ ನಷ್ಟವಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೇ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರು ಸಹ ಗಮನಹರಿಸಬೇಕು. ದೇಶದಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಹಾರವನ್ನು ನಷ್ಟಗೊಳಿಸಬಾರದು ಎಂದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ, ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಅಂತರರಾಷ್ಟ್ರೀಯ ಆಹಾರ ನಷ್ಟ ಮತ್ತು ತ್ಯಾಜ್ಯ ಜಾಗೃತಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಎಂದಿಗೂ ಆಹಾರ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.
ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರಮದಾನ, ಪ್ರವಾಸಿ ತಾಣಗಳು, ಶಾಲಾ-ಕಾಲೇಜು ಮತ್ತು ಮುಂತಾದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಛತೆಯೇ ಸೇವೆ ಎಂಬ ಘೋಷ ವಾಕ್ಯವನ್ನು ಜಿಲ್ಲೆಯಾದ್ಯಂತ ಸಾರಲಾಗಿದೆ. ಸಾರ್ವಜನಿಕರೂ ಸಹ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಜಿಲ್ಲೆಯಾದ್ಯಂತ ಸ್ವಚ್ಛತಾ ಹೀ ಸೇವೆ ಯಸ್ವಿಯಾಗಿ ಸಾಗುತ್ತಿದೆ ಎಂದರು.
ಇದರೊಂದಿಗೆ ಜಿ.ಪಂ.ಕಚೇರೀಯಲ್ಲಿ ಸಹಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಿ ಹಾಕುವ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಹಮ್ಮಿಕೊಳ್ಳಲಾಯಿತು.
ಜಿ.ಪಂ. ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಜಿ.ಪಂ.ಸಿಬ್ಬಂದಿಗಳು ಹಾಜರಿದ್ದರು.
ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು, ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳು, ವರ್ತಕರು, ಸಾರ್ವಜನಿಕರು ಭಾಗವಹಿಸಿದ್ದರು. ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯ ಐದು ತಾಲೂಕಿನ ಎಲ್ಲಾ 103 ಗ್ರಾಮ ಪಂಚಾಯತಿಗಳ ಗಳಲ್ಲಿಯೂ ಹಮ್ಮಿಕೊಳ್ಳಲಾಗಿತ್ತು.
