*ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಿ : ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಕರೆ*

ಮಡಿಕೇರಿ ಸೆ.30 : ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಬಾಲನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲನ್ಯಾಯ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಮಕ್ಕಳ ಪಾಲನೆ ಮತ್ತು ಪೋಷಣೆಗೆ ಪೋಷಕರು ವಿಶೇಷ ಗಮನಹರಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಾಲನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವಂತಾಗಬೇಕು. ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬಾಲಕರ ಹಾಗೂ ಬಾಲಕಿಯರ ಮಂದಿರದಲ್ಲಿ ಇರುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಿ ಅವರ ಕ್ರೀಯಾಶೀಲ ಚಟುವಟಿಕೆಗೆ ಪ್ರೋತ್ಸಾಹಿಸಬೇಕು ಎಂದು ಎಂ.ಜಿ.ಉಮಾ ಸಲಹೆ ನೀಡಿದರು.
ಎಲ್ಲಾ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಿ ಬಾಲ್ಯ ವಿವಾಹ ತಡೆಯುವುದು ಹಾಗೂ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನ ನಡೆಯಬೇಕು ಎಂದರು.
‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡ ಅವರು ಮಾತನಾಡಿ ಮಕ್ಕಳು ರಾಷ್ಟ್ರದ ಆಸ್ತಿಯಾಗಿದ್ದು, ಮಕ್ಕಳ ಪೋಷಣೆ ಮತ್ತು ಪಾಲನೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳು ಗಲಾಟೆ ಮಾಡುತ್ತವೆ ಎಂದು ಗುದ್ದುವುದಲ್ಲ, ತಿದ್ದಬೇಕು ಎಂದು ಸಲಹೆ ನೀಡಿದರು.’
ವಿವಿಧ ಇಲಾಖೆಗಳು ಮಕ್ಕಳ ಪಾಲನೆ ಮತ್ತು ಪೋಷಣೆ ಜೊತೆಗೆ, ಬಾಲ್ಯ ವಿವಾಹ ತಡೆಯುವಲ್ಲಿ ಸಮುದಾಯ ಜಾಗೃತಿ ಅತೀ ಮುಖ್ಯ. ಮಕ್ಕಳ ಸಂರಕ್ಷಣೆ ಮಾಡುವಲ್ಲಿ ಮಕ್ಕಳ ಜೊತೆ ಪ್ರತೀ ನಿತ್ಯ ಮಕ್ಕಳಂತೆ ನಾವು ಸಹ ಬೆರೆಯಬೇಕು ಎಂದರು.
ಬಾಲ್ಯ ವಿವಾಹ ಸಂಬಂಧ ಯಾರೂ ಬೇಕಾದರೂ ಎಫ್‍ಐಆರ್ ದಾಖಲಿಸಬಹುದು. ಬಾಲ್ಯ ವಿವಾಹ ಒಂದು ರೀತಿ ಜೈಲು ವಿವಾಹ ಎಂಬುದನ್ನು ಮರೆಯಬಾರದು ಎಂದು ಒತ್ತಿ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಮಾತನಾಡಿ ಮಕ್ಕಳ ರಕ್ಷಣೆ ಮತ್ತು ಪಾಲನೆ ಜೊತೆಗೆ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಬಾಲ್ಯ ವಿವಾಹ ತಡೆಯುವ ಬಗ್ಗೆ ತಹಶೀಲ್ದಾರರ ನೇತೃತ್ವದಲ್ಲಿ ನಿಯಮಾನುಸಾರ ಸಭೆ ನಡೆಸಬೇಕು. ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಬಾಲ್ಯ ವಿವಾಹ ಎಂಬುದು ಕಲ್ಪನೆಯಲ್ಲಿಯೂ ಸಹ ಬರಬಾರದು ಎಂದು ಹೇಳಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ಗಮನಹರಿಸುವುದು. ಜೊತೆಗೆ ಬಾಲ್ಯ ವಿವಾಹ ತಡೆಯುವಲ್ಲಿ ಅಗತ್ಯ ಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ ಬಾಲನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಮಾಹಿತಿ ನೀಡಿ ಪೋಕ್ಸೋ ಕಾಯ್ದೆ ಬಗ್ಗೆ ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದಲ್ಲಿ ವಿವಿಧ ಕಡೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಹಾಡಿಜನರು ಹಾಗೂ ಲೈನ್‍ಮನೆಗಳಲ್ಲಿ ವಾಸಿಸುವ ಜನರಲ್ಲಿ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಿದೆ. ಜೊತೆಗೆ ಹಾಡಿ ಜನರು ಇತರರಂತೆ ತೊಡಗಿಸಿಕೊಳ್ಳಲು ಅರಿವು ಮೂಡಿಸಬೇಕಿದೆ ಎಂದರು.
ಮಕ್ಕಳ ರಕ್ಷಣಾಧಿಕಾರಿ ಈರಸ್ವಾಮಿ ಅವರು ಮಾತನಾಡಿ ಬಾಲನ್ಯಾಯ ಕಾಯ್ದೆಯಡಿ ಜಿಲ್ಲೆಯಲ್ಲಿ 6 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಒಟ್ಟು 112 ಮಕ್ಕಳು ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷ ಪಾಲನಾ ಯೋಜನೆಯಡಿ 153 ಮಕ್ಕಳನ್ನು ಗುರುತಿಸಲಾಗಿದೆ. ದತ್ತು ಕಾರ್ಯಕ್ರಮದಡಿ 7 ಮಕ್ಕಳು, ಉಪಕಾರ್ ಯೋಜನೆಯಡಿ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯ ಕ್ರಮವಹಿಸಲಾಗಿದೆ. ಮುಖ್ಯಮಂತ್ರಿಯವರ ಬಾಲಸೇವಾ ಯೋಜನೆಯಡಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪೋಷಕರಿಬ್ಬರನ್ನು ಕಳೆದುಕೊಂಡ 5 ಮಕ್ಕಳಿದ್ದು, ಇವರ ಪಾಲನೆ ಪೋಷಣೆಗೆ ಹಾಗೂ ವಿದ್ಯಾರ್ಜನೆಗೆ ಕ್ರಮವಹಿಸಲಾಗಿದೆ. ಇವರಲ್ಲಿ ಶಾಲೆಯಿಂದ ಹೊರಗುಳಿದ ಒಬ್ಬ ಇದ್ದು, ಇವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಉಮಾ ಅವರು ಇದೊಂದು ಸವಾಲಿನ ಕೆಲಸವಾಗಿದ್ದು, ಇವರ ಬದುಕು ಹಸನಾಗಲು ಪ್ರಯತ್ನಿಸಬೇಕು. ಇವನ ಜೀವನ ಉತ್ತಮವಾದಲ್ಲಿ ಪ್ರತಿಯೊಬ್ಬರಿಗೂ ಹೆಸರು ಬರಲಿದೆ ಎಂದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಾಲ್ಕು ದೂರುಗಳು ದಾಖಲಾಗಿದ್ದು, ನಾಲ್ಕು ಪ್ರಕರಣಗಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯಲ್ಲಿ 7 ಪ್ರಕರಣಗಳು ಬಾಕಿ ಇವೆ. 62 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಈರಸ್ವಾಮಿ ತಿಳಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಆದಿವಾಸಿ ಜನರು 58 ಸಾವಿರ ಜನಸಂಖ್ಯೆ ಇದ್ದು, 250 ಹಾಡಿಗಳಲ್ಲಿ ವಾಸಿಸುತ್ತಿದ್ದಾರೆ. 161 ಹಾಡಿಗಳಲ್ಲಿ ಶೇ.75 ಕ್ಕಿಂತ ಹೆಚ್ಚು ಜನರು ವಾಸಿಸುತ್ತಿದ್ದಾರೆ. 4,757 ಕುಟುಂಬಗಳು ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಆದಿವಾಸಿಗಳ ಅಭಿವೃದ್ಧಿಗೆ ಕಾಲೋನಿಗಳನ್ನು ನಿರ್ಮಿಸಿ, ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಗಮನ ಸೆಳೆದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸೂರಜ್ ಅವರು ಮಾತನಾಡಿ ಬಾಲ ನ್ಯಾಯ ಮಂಡಳಿ ಸಭೆಯನ್ನು ಕಾಲ ಕಾಲಕ್ಕೆ ನಡೆಸಲಾಗುತ್ತಿದ್ದು, 35 ಪ್ರಕರಣಗಳು ಇತ್ಯರ್ಥಗೊಂಡಿದ್ದು, 13 ಪ್ರಕರಣಗಳು ಬಾಕಿ ಇವೆ ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಉಷಾ, ನಮಿತಾ ರಾವ್, ಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಆರ್‍ಟಿಒ ನಾಗರಾಜಚಾರ್, ಡಿಡಿಪಿಐ ಸೌಮ್ಯ ಪೊನ್ನಪ್ಪ, ಸಮಾಜ ಕಲ್ಯಾಣಾಧಿಕಾರಿ ಶೇಖರ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕರಾದ ಕವಿತಾ ಅವರು ಹಲವು ಮಾಹಿತಿ ನೀಡಿದರು.
