ಮಡಿಕೇರಿ ಜ.17 : ನಾಡಹಬ್ಬ ದಸರಾ ಆಚರಣೆ ಸಂದರ್ಭ ಡಿಜೆ ಯನ್ನು ನಾಡಿನ ಜನ ಬಯಸಿದ್ದಾರೆ, ಇದಕ್ಕೆ ತಡೆಯೊಡ್ಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬಾರದು ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಕುರಿತು ನ್ಯಾಯಾಲಯದ ಆದೇಶ ಇರುವುದು ನಿಜ, ಆದರೆ ವಿಶೇಷ ಸಂದರ್ಭಗಳಲ್ಲಿ 2-3 ದಿನ ಡಿಜೆ ಬಳಸಲು ರಿಯಾಯಿತಿ ಇದೆ ಎಂದರು.
ವರ್ಷಕ್ಕೆ ಒಂದು ಬಾರಿ ಬರುವ ದಸರಾ ಸಂದರ್ಭ ಎರಡು ದಿನಗಳಷ್ಟೇ ಡಿಜೆ ಬೇಕು ಎಂದು ಕೇಳುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವುದು ಸರಿಯಲ್ಲ. ಯಾರೋ, ಎಲ್ಲಿಂದಲೋ ಬಂದು ನ್ಯಾಯಾಲಯದ ಹೆಸರು ಹೇಳಿ ಇಲ್ಲಿ ಸುದ್ದಿಗೋಷ್ಠಿ ಮಾಡಿದಾಕ್ಷಣ ಅಧಿಕಾರಿಗಳು ಡಿಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ.
ಇಷ್ಟು ವರ್ಷ ಆಗದೇ ಇರುವ ಅನಾಹುತ ಈಗ ಆಗಿ ಬಿಡುತ್ತದೆಯೇ ಎಂದು ಪ್ರಶ್ನಿಸಿದ ಬೋಪಯ್ಯ ಅವರು, ಯಾವುದೇ ಕಾರಣಕ್ಕು ಜಿಲ್ಲಾಡಳಿತ ಡಿಜೆಗೆ ತಡೆಯೊಡ್ಡಬಾರದು ಎಂದರು.







