Advertisement
12:42 AM Saturday 2-December 2023

*ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ಶಾಲೆಗೆ ಪ್ರಿಂಟರ್ ಹಾಗೂ ಸ್ಕ್ಯಾನರ್ ಕೊಡುಗೆ*

20/11/2023

ವಿರಾಜಪೇಟೆ  ನ.20 :  ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅವರ ಸಾಮಾಜಿಕ ಬದ್ಧತೆ ಮೆಚ್ಚುವಂತಹದ್ದು ಎಂದು ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅಭಿಪ್ರಾಯಪಟ್ಟರು.

ಅಮ್ಮತ್ತಿ ಒಂಟಿಯಂಗಡಿಯ ಜಿ. ಎಂ. ಪಿ. ಶಾಲೆಯಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಲಿಟಲ್ ಸ್ಕಾಲರ್ಸ್ ಶಾಲಾ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸಿ ಕಾರ್ಯಕ್ರಮಗಳನ್ನು ನಡೆಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ನಡೆಸಿರುತ್ತಾರೆ. ಎರಡು ಶಾಲೆಗಳು ಒಂದೆಡೆ ಸೇರಿ ಮಾಡುವ ಕಾರ್ಯಕ್ರಮ ಇದಾಗಿದ್ದು ಬೇರೆ ಶಾಲೆಗಳಿಗೆ ಲಿಟಲ್ ಸ್ಕಾಲರ್ಸ್ ಶಾಲೆ ಮಾದರಿಯಾಗಿದೆ. ಸಮಾಜ ಸೇವೆಯಲ್ಲಿ ತೊಡಗಿರುವುದು ಗಮನಾರ್ಹ ಎಂದರು.

ಸಿಆರ್ ಪಿ ಸುಷ್ಮ  ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಓದಿನ ಜೊತೆಯಲ್ಲಿ ಇಂತಹ ಕಾರ್ಯಕ್ರಮಗಳು ಬೇಕು. ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದರು.

ಜಿ. ಎಂ. ಪಿ ಶಾಲಾ ಮುಖ್ಯ ಶಿಕ್ಷಕಿ ಮಿನ್ನಮ್ಮ  ಮಾತನಾಡಿ, ನಮ್ಮ ಶಾಲೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಮಾತ್ರವಲ್ಲದೆ ಶಾಲಾ ಬಳಕೆಗೆ ಪ್ರಿಂಟರ್ ಹಾಗೂ ಸ್ಕ್ಯಾನರ್ ನೀಡಿರುವುದು ಪ್ರಶಂಸನೀಯ ಎಂದರು.

ಈ ಸಂದರ್ಭ  ಒಂಟಿಯಂಗಡಿ ಜಿ. ಎಂ. ಪಿ ಶಾಲಾ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಉದ್ಯಮಿಗಳು, ಸಮಾಜ ಸೇವಕರು ಹಾಗೂ ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥ  ಪೂಜಾ ರವೀಂದ್ರ,  ಜಿ. ಎಂ. ಪಿ ಶಾಲೆಗೆ ಪ್ರಿಂಟರ್ ಹಾಗೂ ಸ್ಕ್ಯಾನರ್ ನ್ನು ಕೊಡುಗೆಯಾಗಿ ನೀಡಿದರು.

ಶಿಕ್ಷಕಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.