Advertisement
8:17 PM Saturday 9-December 2023

*ಕೂಡಿಗೆ ಸೈನಿಕ ಶಾಲೆಯಲ್ಲಿ ಕ್ರೀಡಾಕೂಟ : ಸೋಲುಗಳಿಂದ ತಪ್ಪುಗಳನ್ನು ಅರಿಯಬೇಕು : ಡೆಪ್ಯೂಟಿ ಕಮಾಂಡೆಂಟ್ ಏರ್ ಕಮೋಡೋರ್ ನರೇಶ್ ಕುಮಾರ್ ಸೈಧಾ*

20/11/2023

ಮಡಿಕೇರಿ ನ.20 : ಕ್ರೀಡಾ ಪಟುಗಳು ಕ್ರೀಡಾಸ್ಫೂರ್ತಿಯ ಮೌಲ್ಯಗಳನ್ನು ಅಳವಡಿಸಿಕೊಂಡು, ಗೆಲುವು ಸಂಪಾದಿಸಬೇಕು ಹಾಗೂ ಸೋಲುಗಳಿಂದ ತಮ್ಮ ತಪ್ಪುಗಳನ್ನು ಅರಿಯಬೇಕು ಎಂದು ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಯ ಡೆಪ್ಯೂಟಿ ಕಮಾಂಡೆಂಟ್ ಏರ್ ಕಮೋಡೋರ್ ನರೇಶ್ ಕುಮಾರ್ ಸೈಧಾ ಹೇಳಿದ್ದಾರೆ.
ಕೂಡಿಗೆ ಸೈನಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಿಷ್ಣುತಾ ಮನೋಭಾವದೊಂದಿಗೆ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳಬೇಕು. ವಿಜೇತ ತಂಡವಾಗಿ ಹೊರಹೊಮ್ಮಲು ಸಾಂಘಿಕ ಹೋರಾಟ ಮಾಡಬೇಕು. ವಿದ್ಯಾರ್ಥಿಗಳು ಸ್ಪರ್ಧೆಯ ಎಲ್ಲೆಗಳನ್ನು ಮೀರಿದ ಪರಸ್ಪರ ಸ್ನೇಹತ್ವದ ಮನೋಭಾವನೆಯನ್ನು ಹೊಂದಬೇಕೆಂದು ಕರೆ ನೀಡಿದರು.
ಕೆಡೆಟ್ ದರ್ಶನ್, ಕೆಡೆಟ್ ಧ್ರುವ ಹಾಗೂ ಕೆಡೆಟ್ ಮಾನಸ್ ಕುಮಾರ್ ಈ ಕ್ರೀಡಾ ಜ್ಯೋತಿಯನ್ನು ತಂದರು. ಶಾಲೆಯ ಕ್ರೀಡಾ ನಾಯಕ ಕೆಡೆಟ್ ದರ್ಶನ್ ಪಡ್ನಾಡ್ ನೇತೃತ್ವದಲ್ಲಿ ಎಲ್ಲಾ ಸ್ಪರ್ಧಾಳುಗಳು ಪಥಸಂಚಲನ ನಡೆಸಿದರು. ವಿದ್ಯಾರ್ಥಿ ಓಂಕಾರ ಪಾಣಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಸುಬ್ರೊತೋ ನಿಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿ, ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹಯುತವಾದ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಿತು.
ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‍ಪ್ರೀತ್ ಸಿಂಗ್, ಹಿರಿಯ ಶಿಕ್ಷಕ ಎನ್.ವಿಬಿನ್ ಕುಮಾರ್, ಬೋಧಕ-ಬೋಧಕೇತರ ವರ್ಗ, ಎನ್‍ಸಿಸಿ ಮತ್ತು ಪಿ ಐ ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.