Advertisement
9:28 PM Saturday 9-December 2023

*ನ.23 ಮತ್ತು 24 ರಂದು ಬಿಳಿಗೇರಿ ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ*

20/11/2023

ಮಡಿಕೇರಿ ನ.20 : ಪೌರಾಣಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ನ.23 ಮತ್ತು 24 ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಮಂಞಿರ ಕೆ. ಉಮೇಶ್ ಅಪ್ಪಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಪುರಾತನವಾದ ಶ್ರೀ ಪರದೇವರ ದೇವಾಲಯವನ್ನು ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆಯೆಂದು ತಿಳಿಸಿದರು.
ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಗಳು ಕ್ಷೇತ್ರದ ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ ನಡೆಯಲಿದೆ. ನ.23 ರಂದು ಸಂಜೆ 6 ಗಂಟೆಗೆ ಸ್ಥಳ ಶುದ್ಧಿ, ಪಂಚಗವ್ಯ ಪುಣ್ಯಾಹಃ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ, ಸುದರ್ಶನ ಹೋಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆಯೆಂದು ಮಾಹಿತಿ ನೀಡಿದರು.
ನ.24 ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಸಪ್ತಶತಿ ಪಾರಾಯಣ, ನವಕ ಕಲಶ ಪ್ರತಿಷ್ಠೆ, ಕಲಶ ಪೂಜೆ ನಡೆಯಲಿದೆ. ಬೆಳಗ್ಗೆ 8.50 ರಿಂದ 10.30 ರವರೆಗಿನ ಧನುರ್ ಲಗ್ನದಲ್ಲಿ ಧರಣೇಶ್ ಅವರಿಂದ ಪರದೇವರ ಮೊಗ ಹಾಗೂ ಆಯುಧಗಳ ಪ್ರತಿಷ್ಠೆ ನಡೆಯಲಿದೆ. ನಂತರ ದುರ್ಗಾ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆಯೆಂದು ತಿಳಿಸಿದರು.
ದೇವರ ಗ್ರಾಮ ‘ಬಿಳಿಗೇರಿ’- ಬಿಳಿಗೇರಿ ಗ್ರಾಮವು ದೇವರ ಗ್ರಾಮವೆಂದೇ ಪ್ರಸಿದ್ಧಿ ಪಡೆದಿದೆ. ಅತ್ಯಂತ ಪುರಾತನ ಮತ್ತು ಪೌರಾಣಿಕ ಹಿನ್ನೆಲೆಯ ಆರು ದೇವಸ್ಥಾನಗಳ ನಿರ್ಮಾಣ ಕಾರ್ಯ ಇಲ್ಲಿಯವರೆಗೆ ನಡೆದಿದೆ. ಶ್ರೀ ಅರ್ಧನಾರೀಶ್ವರ ದೇವಾಲಯವನ್ನು 2007 ರಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 2008 ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಶ್ರೀ ವಿಷ್ಣುಮೂರ್ತಿ ದೇವಾಲಯ ನಿರ್ಮಾಣ, 2013 ರಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಭಗವತಿ ದೇವಾಲಯದ ನಿರ್ಮಾಣ, 2014 ರಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಭದ್ರಕಾಳಿ ದೇವಾಲಯವನ್ನು ಹಾಗೂ 2017 ರಲ್ಲಿ ಶ್ರೀ ಪನ್ನಂಗಾಲ ತಮ್ಮೆ ದೇವಾಲಯ ನಿರ್ಮಾಣವಾಗಿದೆಯೆಂದು ಉಮೇಶ್ ಅಪ್ಪಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಪರದೇವರ ದೇವಸ್ಥಾನದ ತಕ್ಕರಾದ ಪುರುಷೋತ್ತಮ ರೈ, ಶ್ರೀ ಭಗವತಿ ದೇವಾಲಯದ ಅಧ್ಯಕ್ಷ ಪರ್ಲಕೋಟಿ ಅಣ್ಣಿ ಮಾಚಯ್ಯ, ಶ್ರೀ ಪರದೇವರ ದೇವಸ್ಥಾನದ ಅಧ್ಯಕ್ಷ ಕೋಟೇರ ಶರಿ ಮುದ್ದಪ್ಪ ಹಾಗೂ ಕಾರ್ಯದರ್ಶಿ ಐರೀರ ಎನ್.ಬೋಪಯ್ಯ ಉಪಸ್ಥಿತರಿದ್ದರು.