*ಕಾರ್ಯಪ್ಪ ಕಾಲೇಜ್ ನಲ್ಲಿ ಪರೀಕ್ಷಾ ಪುಸ್ತಕಗಳ ಪ್ರದರ್ಶನ : ವಿದ್ಯಾರ್ಥಿಗಳು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು : ಮೇಜರ್ ಪ್ರೊ.ರಾಘವ ಕರೆ*

ಮಡಿಕೇರಿ ನ.21 : ವಿದ್ಯಾರ್ಥಿ ಜೀವನದಿಂದಲೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಕರೆ ನೀಡಿದ್ದಾರೆ.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾರ್ಯಪ್ಪ ಕಾಲೇಜ್ ನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಓದುವ ಹವ್ಯಾಸ ಜ್ಞಾನವನ್ನು ಹೆಚ್ಚಿಸುತ್ತದೆ, ಮಾತ್ರವಲ್ಲದೆ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿ ಅಧ್ಯಯನ ಮಾಡಿದರೆ ಪದವಿ ಹಂತವನ್ನು ಮುಗಿಸಿದ ತಕ್ಷಣ ಸರಕಾರಿ ಉದ್ಯೋಗವನ್ನು ಪಡೆಯಲು ಅನುಕೂಲವಾಗುತ್ತದೆ. ಮಾಹಿತಿ ಮತ್ತು ತಂತ್ರಜ್ಞಾನ ಕೈ ಬೆರಳಿನಲ್ಲಿದ್ದರೂ ಪುಸ್ತಕವನ್ನು ಕೈಯಲ್ಲಿಡಿದು ಓದುವ ಅನುಭವವೇ ಶ್ರೇಷ್ಠವಾದದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರೊ.ರಾಘವ ಕರೆ ನೀಡಿದರು.
ಕಾಲೇಜ್ ನ ಗ್ರಂಥಪಾಲಕಿ ಡಾ.ಸಿ.ವಿಜಯಲತಾ ಮಾತನಾಡಿ, ವರ್ಷಂಪ್ರತಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುತ್ತದೆ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೂಲಕ ಉಪನ್ಯಾಸ, ಪುಸ್ತಕ ಪ್ರದರ್ಶನ, ಪ್ರಬಂಧ ಸ್ಪರ್ಧೆಯನ್ನು ಕಾಲೇಜ್ ನಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿ ಪುಸ್ತಕ ಪ್ರದರ್ಶನ ಮಾಡಲಾಗಿದೆ, ವಿದ್ಯಾರ್ಥಿಗಳು ಪುಸ್ತಕ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ.ರಾಜೇಂದ್ರ, ಕನ್ನಡ ವಿಭಾಗದ ಅಧ್ಯಾಪಕ ಡಾ.ಎನ್.ವಿ.ಕರುಣಾಕರ, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜು ಗ್ರಂಥಾಲಯ ವಿಭಾಗದ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಚಂದ್ರಾವತಿ ಪ್ರಾರ್ಥಿಸಿ, ಲಿಖಿತ ವಂದಿಸಿದರು.
