*ಕೊಡವ ನ್ಯಾಷನಲ್ ಡೇ ಯಶಸ್ಸಿಗಾಗಿ ದೇವಟ್ ಪರಂಬ್ ನಲ್ಲಿ ವಿಶೇಷ ಪ್ರಾರ್ಥನೆ*

ಮಡಿಕೇರಿ ನ.21 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.26 ರಂದು ನಡೆಯುವ 33 ನೇ ಕೊಡವ ನ್ಯಾಷನಲ್ ಡೇ ಯಶಸ್ಸಿಗಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ದೇವಟ್ ಪರಂಬುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಡವ ನರಮೇಧದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಮುಖರು ಗಾಳಿಯಲ್ಲಿ ಗುಂಡು ಹಾರಿಸಿ ಹಿರಿಯರನ್ನು ಸ್ಮರಿಸಿದರು. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಕೊಡವ ನ್ಯಾಷನಲ್ ಡೇ ಸಂದರ್ಭ ಮತ್ತೊಮ್ಮೆ ಕೊಡವರ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಅಂದು ಭಾರತೀಯ ಸಂವಿಧಾನದ ದಿನವನ್ನು ಕೂಡ ಸಿಎನ್‍ಸಿ ವತಿಯಿಂದ ಆಚರಿಸಲಾಗುವುದು ಎಂದು ನಾಚಪ್ಪ ಹೇಳಿದರು.
ಪುತ್ತರಿ ಹಬ್ಬ ಸರ್ವರಿಗೂ ಧಾನ್ಯ, ಸಂಪತ್ತು, ಪ್ರಶಾಂತತೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದರು.
ಸಿಎನ್‍ಸಿಯ ಸದಸ್ಯರಾದ ಕಲಿಯಂಡ ಪ್ರಕಾಶ್, ಅಲ್ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್ ಮತ್ತಿತರರು ವಿಶೇಷ ಪ್ರಾರ್ಥನೆ ಸಂದರ್ಭ ಹಾಜರಿದ್ದರು.
