ಮೂರ್ನಾಡು ಡಿ.22 : ಶಿಕ್ಷಣ ಸಂಸ್ಥೆಗಳ ಮೂಲಕ ಮಾತ್ರ ದೇಶವು ಬದಲಾವಣೆ ಕಾಣಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ವೃತ್ತಿ ಇನ್ನು ಮುಂದಕ್ಕೆ ತುಂಬಾ ಗೌರವಯುತವಾದ ವೃತ್ತಿಯಾಗಿ ಮಾರ್ಪಾಡುಗೊಳ್ಳುತ್ತದೆ. ಶಿಕ್ಷಕರಿಗೆ ವಿಶೇಷವಾದ ಶಕ್ತಿಯಿದ್ದು ಆ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ, ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಇದರಿಂದ ಮುಂದಕ್ಕೆ ಕ್ರಿಮಿನಲ್‍ಗಳನ್ನು ಹಿಡಿಯುವ ಕಾರ್ಯಗಳು ಪೊಲೀಸ್ ಇಲಾಖೆಗೆ ಇರುವುದಿಲ್ಲ. ವಿದ್ಯಾರ್ಥಿಗಳು ಸಕರಾತ್ಮಕ ವ್ಯಕ್ತಿತ್ವವುಳ್ಳ ಶಕ್ತಿಯನ್ನು ಹೊಂದಿದ್ದು, ಆ ಶಕ್ತಿಯ ಮುಖಾಂತರ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು. ಶಾಲೆಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ಮಕ್ಕಳಲ್ಲಿರುವ ಹಲವು ವಿಧದ ಪ್ರತಿಭೆಗಳನ್ನು ಪ್ರಸ್ತುತ ಪಡಿಸುವ ವೇದಿಕೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರೀರ ಜಗತ್ತಿಮ್ಮಯ್ಯ ಮಾತನಾಡಿ, ಈ ವಿದ್ಯಾಸಂಸ್ಥೆ ಉತ್ತಮ ಬೆಳವಣಿಗೆ ಕಂಡಿದೆ. ವಿದ್ಯಾಸಂಸ್ಥೆಗೆ ಪೋಷಕರ ಸಹಕಾರ ಅತ್ಯಗತ್ಯವಾಗಿದೆ. ಆಗಮಾತ್ರ ವಿದ್ಯಾರ್ಥಿಗಳು ಸಾಧನೆ ಗೈಯಲು ಸಾಧ್ಯ ಎಂದ ಅವರು ಪುಸ್ತಕಗಳನ್ನು ಓದುವ ಹವ್ಯಾಸವನ್ನುಬೆಳೆಸಿಕೊಳ್ಳುವುದುಅತ್ಯವಶ್ಯಕ. ಪುಸ್ತಕಗಳಿಂದ ಮಾತ್ರ ಪ್ರಪಂಚ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಈ ವಿದ್ಯಾಸಂಸ್ಥೆಯಲಿ ಎಲ್ಲಾರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಕ್ರೀಡೆ, ಎನ್‍ಸಿಸಿ, ಎನ್‍ಎಸ್‍ಎಸ್ ಹೀಗೆ ಹಲವಾರು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣುಅಪ್ಪಣ್ಣ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರುಗಳಾದ ಈರಮಂಡ ಸೋಮಣ್ಣ, ನಂದೇಟಿರ ರಾಜಾಮಾದಪ್ಪ, ಪಳಗಂಡ ವಿಠಲ್ ಪೂವಯ್ಯ, ಎ.ಎಂ.ಶೈಲಾ, ಮೂಡೇರ ಹರೀಶ ಕಾಳಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ರೇಖಾಚಿಣ್ಣಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಷ್ಮಾ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿ ಲೀನಾ ವಂದಿಸಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು










