ಮಡಿಕೇರಿ ಡಿ.26 : ಮೂಲತಃ ಮೇಕೇರಿ ಗ್ರಾಮದ ನಿವಾಸಿಗಳು, ಪ್ರಸ್ತುತ ಪೋಲೀಸ್ ಇಲಾಖೆಯ ಸಿಬ್ಬಂದಿಯಾಗಿರುವ ರಕ್ತದಾನಿ ಬಿ.ಯಂ.ರಾಮಪ್ಪ ಅವರು ಇದೇ ಡಿ.29 ರಂದು ದಾಖಲೆಯ 50ನೇ ಬಾರಿಗೆ ರಕ್ತದಾನ ಮಾಡಲಿದ್ದಾರೆ. ಮೇಕೇರಿಯ ಶ್ರೀ ಸ್ವಾಗತ ಯುವಕ ಸಂಘದ ನೇತೃತ್ವದಲ್ಲಿ ನಡೆಯಲಿರುವ 12 ನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಲಿದ್ದಾರೆ. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಇದೇ ಕಾರ್ಯಕ್ರಮದಲ್ಲಿ ರಾಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ. ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.









