ವಿರಾಜಪೇಟೆ ಮಾ.27 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ, ರಾಜ್ಯಶಾಸ್ತ್ರ ವಿಭಾಗ ಮತ್ತು ಚುನಾವಣಾ ಸಾಕ್ಷರತಾ ಸಮಿತಿಯ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಮತದಾನ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹೆಚ್.ಪಿ.ನಿರ್ಮಲ ಮಾತನಾಡಿ, ಇಂದಿನ ಯುವ ಸಮುದಾಯವು ಮತದಾನವನ್ನು ಕೇವಲ ಹಕ್ಕು ಎಂದು ಪರಿಗಣಿಸದೆ ದೇಶದ ಜವಾಬ್ದಾರಿಯುತ ನಾಗರಿಕನಾಗಿ ಮತದಾನ ನನ್ನ ಕರ್ತವ್ಯವೆಂದು ಭಾವಿಸಿಸಿ ಸದೃಢ ಭಾರತವನ್ನು ನಿರ್ಮಿಸುವಲ್ಲಿ ವಿವೇಚನೆಯಿಂದ ನಮ್ಮ ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಭವಿಷ್ಯದ ಭಾರತವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ, ವಿದ್ಯಾವಂತ ಯುವಜನತೆಯು ಮತದಾನದಂತಹ ರಾಜಕೀಯ ಚಟುವಟಿಕೆಗಳನ್ನು ಅಸಡ್ಡೆಯಿಂದ ಕಾಣುತ್ತಿದ್ದು, ಇದು ನಮ್ಮ ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಯುವಜನತೆಯು ಹೆಚ್ಚು ಪರಿಣಾಮಕಾರಿಯಾಗಿ ಆಲೋಚಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಚುನಾವಣಾ ಸಾಕ್ಷರತಾ ಸಮಿತಿಯ ಕ್ಯಾಂಪಸ್ ರಾಯಭಾರಿ ತೃತೀಯ ಬಿ.ಕಾ0 ವಿದ್ಯಾರ್ಥಿ ಸಚಿನ್ ಪ್ರತಿಜ್ಞಾ ವಿಧಿ ಭೋದಿಸಿದರು. ಪ್ರಥಮ ಬಿ.ಎ.ವಿದ್ಯಾರ್ಥಿ ಕೀರ್ತನಾ ಮತದಾನ ಜಾಗೃತಿ ಗೀತೆಯನ್ನು ಹಾಡಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆರ್.ದಿವ್ಯ ಮತ್ತು ಚುನಾವಣಾ ಸಾಕ್ಷರತಾ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಂ.ಬಿ.ದಿವ್ಯ ಹಾಜರಿದ್ದರು. ತೃತೀಯ ಬಿ.ಎ.ವಿದ್ಯಾರ್ಥಿಗಳಾದ ಚೇತನ್ ಸ್ವಾಗತಿಸಿದರು. ಅಜಿತ್ ನಿರೂಪಿಸಿದರು. ಮುತ್ತಮ್ಮ ವಂದಿಸಿದರು.








