ಕುಶಾಲನಗರ ಏ.11 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಕೂಡ್ಲೂರು ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ ಅಂಗವಾಗಿ ಜನಪದೀಯ ಸಂಸ್ಕೃತಿಯ ಆಚರಣೆಗಳಲ್ಲಿ ಒಂದಾದ ‘ಹೊನ್ನಾರು’ ಉತ್ಸವವನ್ನು ರೈತರು ಸಂಭ್ರಮ, ಸಡಗರದಿಂದ ಆಚರಿಸಿದರು.
ಗ್ರಾಮದ ದೇವಾಲಯದಲ್ಲಿ ಜಾನುವಾರುಗಳಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು, ಉತ್ತಮ ಮಳೆ ಬೆಳೆ ಬಂದು ಕೃಷಿ ಕಾರ್ಯ ಸಂತುಷ್ಟಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದಲ್ಲಿ ಗ್ರಾಮ ದೇವಾಲಯ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ “ಹೊನ್ನಾರು” ನೇಗಿಲು ಹೂಡಿ ಉಳುಮೆ ಕಾರ್ಯಕ್ಕೆ ರೈತ ಕೆ.ಆರ್.ನಾಗರಾಜು ಚಾಲನೆ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ ಮಾತನಾಡಿ, ನಮ್ಮ ಪೂರತವಿಕರು ನಡೆಸಿಕೊಂಡು ಬರುತ್ತಿರುವ ಹೊನ್ನಾರು ಉತ್ಸವವನ್ನು ಗ್ರಾಮದಲ್ಲಿ ಎಲ್ಲರೂ ಜತೆಗೂಡಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳೆದಂತೆ ಕೃಷಿ ಸಂಸ್ಕೃತಿಯು ಕ್ಷೀಣಿಸದಂತೆ ನಮ್ಮ ಪೂರ್ವಿಕರು ಹಾಕಿಕೊಟ್ಟ ಇಂತಹ ಜನಪದೀಯ ಸಂಸ್ಕೃತಿಯನ್ನು ಇಂದಿನ ತಲೆಮಾರಿಗೆ ಪರಿಚಯಿಸಲು ಹೊನ್ನಾರು ಉತ್ಸವ ಸಹಕಾರಿಯಾಗಿದೆ ಎಂದರು.
ಗ್ರಾಮದ ಹಿರಿಯ ರೈತ ಕೆ.ಎಸ್.ರಾಜಾಚಾರಿ, ಕೃಷಿಯಲ್ಲಿ ‘ಹೊನ್ನಾರು’ ಉಳುಮೆಯ ಮಹತ್ವ ಕುರಿತು ತಿಳಿಸಿದರು.
ಸ್ಥಳೀಯರಾದ ಕೆ.ಎನ್.ಸೋಮಶೇಖರ್, ಕೆ.ಬಿ.ಈರಪ್ಪ, ರುಕ್ಮಾಂಗದ ಅರಸ್, ನಟರಾಜ, ಚಂದ್ರು ಇತರರು ಇದ್ದರು.
ಯುಗಾದಿ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡಿದ್ದ ಕಂದಲಿ ಅಲಂಕಾರ ಗಮನ ಸೆಳೆಯಿತು.
ಅಡ್ಡಪಲ್ಲಕ್ಕಿಯಲ್ಲಿ ದೇವರ ಮೂರ್ತಿ ಕುಳ್ಳಿರಿಸಿದ ನಂತರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.








