ಮಡಿಕೇರಿ ಏ.13 NEWS DESK : ಪ್ರಸ್ತುತ ರಾಜಕೀಯ ವಾತಾವರಣ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಗೆಲುವಿಗೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.ನಗರದ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಬಿಜೆಪಿ ಮತ್ತು ತಟಸ್ಥವಾಗಿ ಉಳಿದಿರುವ ಜೆಡಿಎಸ್ ಪ್ರಮುಖರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಬಿಜೆಪಿ ನಾಯಕರು ಜೆಡಿಎಸ್‍ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಮುಂದುವರೆಯಬೇಕು. ಗೆಲುವಿಗೆ ಪೂರಕವಾಗಿ ಎರಡೂ ಪಕ್ಷಗಳು ಪರಸ್ಪರ ಅರ್ಥೈಸಿಕೊಂಡು ಮುನ್ನಡೆಯುವ ಮೂಲಕ ಯದುವೀರ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ತಟಸ್ಥರಾಗಿದ್ದ ಕೊಡಗಿನ ಜೆಡಿಎಸ್ ಪ್ರಮುಖರನ್ನು ಸಂಪರ್ಕಿಸಿ ಈ ಚುನಾವಣೆಯಲ್ಲಿ ಯದುವೀರ್ ಪರವಾಗಿ ಸಕ್ರಿಯರಾಗುವಂತೆ ಮನವಿ ಮಾಡಿದ್ದೇನೆ. ಮೈಸೂರು ರಾಜರು ಈ ನಾಡಿಗೆ ನೀಡಿದ ಕೊಡುಗೆಗಳು ಅನುಪಮವಾದವು. ಇಂತಹ ರಾಜವಂಶಸ್ಥರ ಕುಡಿ ಯದುವೀರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸವುದು ಉಪಕಾರಸ್ಮರಣೆಯೆಂದು ವಿಶ್ವನಾಥ್ ತಿಳಿಸಿದರು.
ಯಾವುದೇ ಸರ್ಕಾರಗಳು ಮೂಲಭೂತವಾಗಿ ಅಕ್ಷರ, ಆರೋಗ್ಯ ಮತ್ತು ಉದ್ಯೋಗ ಭದ್ರತೆಯನ್ನು ಜನತೆಗೆ ಒದಗಿಸುವ ಮೂಲಭೂತ ಜವಾಬ್ದಾರಿ ಹೊಂದಿವೆ. ಇದನ್ನು ಮೀರಿ ಇಂದು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭಾಗ್ಯಗಳ ಮೂಲಕ ಮಹಿಳೆÉಯರಿಗೆ ಮಾಸಿಕ 2 ಸಾವಿರ ಹಣವನ್ನು ನೀಡುತ್ತಿದೆ. ಇದರ ಹೊಂದಾಣಿಕೆಗಾಗಿ ಅಬಕಾರಿ ಇಲಾಖೆಯ ಆದಾಯವನ್ನು 23 ಸಾವಿರ ಕೋಟಿ ರೂ.ಗಳಿಂದ 40 ಸಾವಿರ ಕೋಟಿಗಳಿಗೆ ಬೆಲೆ ಹೆಚ್ಚಳದ ಮೂಲಕ ಮಾಡಿದೆ. ಪುರುಷರಿಗೆ ಮದ್ಯ ಕುಡಿಸಿ ಮಹಿಳೆಯರಿಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಶಾಸಕ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕಳೆದ ಒಂದು ದಶಕದ ಮೋದಿ ಆಡಳಿತವನ್ನು ಇಡೀ ವಿಶ್ವವೆ ಮೆಚ್ಚಿದೆ. ಇಂತಹ ಸರ್ಕಾರದ ವಿರುದ್ಧ ಐಎನ್‍ಡಿಐಎ ಎನ್ನುವ ಕೂಟವನ್ನು ಕಟ್ಟಿ ಮಾಡುತ್ತಿರುವ ಸುಳ್ಳು ಆರೋಪಗಳಿಗೆ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಅಪಾಯವೆನ್ನುವ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ನೀಡಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಇದರ ಐದು ಪಟ್ಟಿನ 25 ಗ್ಯಾರಂಟಿಗಳನ್ನು ಘೋಷಿಸಿದೆ. ಈ ಚುನಾವಣೆ ರಾಷ್ಟ್ರೀಯ ಹಿತಾಸಕ್ತಿಯ, ಭದ್ರತೆಯ, ದೇಶದ ಭವಿಷ್ಯವನ್ನು ನಿರೂಪಿಸುವ ಚುನಾವಣೆಯೇ ಹೊರತು ‘ಗ್ಯಾರಂಟಿಗಳ ಚುನಾವಣೆ’ ಅಲ್ಲವೆಂದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಈ ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರನ್ನು ಪಕ್ಷಾತೀತವಾಗಿ, ರಾಜಕೀಯ ಮರೆತು ಗೆಲ್ಲಿಸುವ ಕೆಲಸವಾಗಬೇಕು. ಕಳೆದ ಹತ್ತು ವರ್ಷಗಳ ಅವಧಿಯ ಮೋದಿ ಅವರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಗಳಾಗಿಲ್ಲ. ಹೀಗಿದ್ದೂ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್ ಹೆದರಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ನಾವು ಹೊರ ಬರಬೇಕು ಮತ್ತು ಯದುವೀರ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಮುಂದಾಗಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಮೋದಿ ಆಡಳಿತದ ಅವಧಿಯಲ್ಲಿ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಈ ಕ್ಷೇತ್ರದಿಂದ ಯದುವೀರ್ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಈ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ನಾಲ್ಕು ನೂರು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದ್ದು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಮನ್ಸೂರ್ ಆಲಿ ಮಾತನಾಡಿ ಯದುವೀರ್ ಅವರ ಚುನಾವಣಾ ಪ್ರಚಾರದಲ್ಲಿ ನಮ್ಮನ್ನು ಬಳಸಿಕೊಳ್ಳುವಂತೆ ಬಿಜೆಪಿ ಪ್ರಮುಖರಲ್ಲಿ ಕೋರಿ ಕೊಂಡರಲ್ಲದೆ, ಕಾಂಗ್ರೆಸ್‍ನ ಅನಗತ್ಯ ಸುಳ್ಳು ಆರೋಪಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕೆಂದು ತಿಳಿಸಿದರು.
ಜೆಡಿಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ ಮಾತನಾಡಿದರು.








